ಸೀರೆ ಹಂಚುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜಿಯಾಗಿದ್ದಾರೆ. ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳೆಲ್ಲ ಫುಲ್ ಲೇಜಿಯಾಗಿದ್ದಾರೆ ! ಬೀದರ್ ಸೇರಿ ರಾಜ್ಯಾದ್ಯಂತ ಆಡಳಿತ ವ್ಯವಸ್ಥೆ ಹಾಳಾಗಿ ಹೋಗಿದ್ದು, ಕೆಳ ಹಂತದಿಂದ ಹಿಡಿದು ಮೇಲಿನವರೆಗೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಜೆಡಿಎಸ್ ಮುಖಂಡ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ವಾಗ್ದಾಳಿ ನಡೆಸಿದರು.
ಗೋರನಳ್ಳಿ(ಬಿ)ಯಲ್ಲಿ ಸೋಮವಾರ ನಡೆದ ದಕ್ಷಿಣ ಹೋಬಳಿ ಜನಸ್ಪಂದನ ಸಭೆಗೆ ಅಧಿಕಾರಿಗಳು ಬರಲಿಲ್ಲ. ಇದು ಆಡಳಿತದ ಅವ್ಯವಸ್ಥೆ ಹಾಗೂ ಸರಕಾರಕ್ಕೆ ಇದರ ಮೇಲೆ ಹಿಡಿತ ಇಲ್ಲದಿರುವುದು ಸ್ಪಷ್ಟಪಡಿಸಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಜನರ ಸಮಸ್ಯೆ ಬಗೆಹರಿಸುವುದು ಅಧಿಕಾರಿಗಳ ಜವಾಬ್ದಾರಿ. ಇದೇ ಉದ್ದೇಶದಿಂದ ಜನಸ್ಪಂದನ ಸಭೆ ನಡೆಸಲಾಗುತ್ತಿದೆ. ಆದರೆ ಅಧಿಕಾರಿಗಳು ಎಲ್ಲೋ ಕುಳಿತು ಮನಸ್ಸಿಗೆ ಬಂದಂತೆ ಮಾಡುತ್ತ ನಡೆದರೆ ಜನರ ಗತಿ ಏನು? ಅಧಿಕಾರಿಗಳ ವರ್ತನೆ ಹೀಗಿರುವುದಾದರೆ ಸರಕಾರದ ಜನಸ್ಪಂದನಕ್ಕೆ ಅರ್ಥವೇನು ಎಂದು ಪ್ರಶ್ನಿಸಿದರು.
ನಾವು ಜನಪರ ಆಡಳಿತ ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿ, ಸಚಿವರು ಹೇಳುತ್ತಿರುವುದು ಅರ್ಥಹೀನ. ಆಡಳಿತ ಯಂತ್ರವೇ ನಿಷ್ಕ್ರೀಯವಾಗಿರುವಾಗ ಜನಪರ ಆಡಳಿತ ನೀಡಲು ಎಲ್ಲಿಂದ ಸಾಧ್ಯ? ಭ್ರಷ್ಟ ವ್ಯವಸ್ಥೆಯ ಆಡಳಿತ ನೀಡುತ್ತಿರುವ ಈ ಸರಕಾರಕ್ಕೆ ಜನರೇ ಪಾಠ ಕಲಿಸುತ್ತಾರೆ. ಈ ಕಾಲವೂ ಸನ್ನಿಹಿತವಾಗಿದೆ ಎಂದು ಭವಿಷ್ಯ ನುಡಿದರು.
ಮುಖ್ಯಮಂತ್ರಿ ರಾಜ್ಯಾದ್ಯಂತ ಬರೀ ಸೀರೆ ಹಂಚುತ್ತ ತಿರುಗುತ್ತಿದ್ದಾರೆ. ಸದ್ಯಕ್ಕೆ ಸರಕಾರಿ ಯಂತ್ರವೇ ಸೀರೆ ಹಂಚುವಲ್ಲಿ ಮಗ್ನವಾಗಿದೆ. ಎಲ್ಲರೂ ಸೀರೆ ಹಿಂದೆಯೇ ಬಿದ್ದಿರುವುದರಿಂದ ಆಡಳಿತ ವ್ಯವಸ್ಥೆ ಕುಸಿದಿದೆ. ಅಧಿಕಾರಿಗಳು ಇದೊಂದು ಬಿಟ್ಟರೆ, ಬೇರ್ಯಾವ ಕೆಲಸವೂ ಮಾಡುತ್ತಿಲ್ಲ. ಜನರ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದರು.