ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಮೀಸಲಾತಿ ಪ್ರಕರಣದ ಗೊಂದಲಕ್ಕೆ ಸಂಬಂಧಿಸಿದಂತೆ ಕೊನೆಗೂ ಆಡಳಿತಾರೂಢ ಬಿಜೆಪಿ ಸರಕಾರ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿಯುವ ಮೂಲಕ ಮೀಸಲಾತಿ ಕುರಿತು ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಹಿಂಪಡೆಯಲು ರಾಜ್ಯ ಸರಕಾರ ಮಂಗಳವಾರ ನಿರ್ಧರಿಸಿದೆ.
ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ರಾಜ್ಯ ಚುನಾವಣಾ ಆಯೋಗ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದ ಬೆನ್ನಲ್ಲೇ ಸರಕಾರ ದಿಢೀರ್ ಆಗಿ ಈ ನಿರ್ಣಯ ಕೈಗೊಂಡಿದೆ.
31 ಜಿಲ್ಲೆಗಳ 1013 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕ್ಷೇತ್ರವಾರು ಮೀಸಲಾತಿ ಪಟ್ಟಿ ಪ್ರಕಟಿಸಿದ ಚುನಾವಣಾ ಆಯೋಗ, ಶೇ.53ರಷ್ಟು ಮಹಿಳೆಯರಿಗೆ, ಶೇ.47ರಷ್ಟು ಪುರುಷರಿಗೆ, ಶೇ. 18ರಷ್ಟು ಪರಿಶಿಷ್ಟ ವರ್ಗಕ್ಕೆ, ಶೇ.5ರಷ್ಟು ಪರಿಶಿಷ್ಟ ಪಂಗಡಕ್ಕೆ ಎಂದು ತಿಳಿಸಿತ್ತು.
ಆದರೆ ರಾಜ್ಯ ಸರಕಾರ ಹಿಂದುಳಿದ ವರ್ಗಗಳಿಗೆ ತಾರತಮ್ಯ ನೀತಿ ಎಸಗಿ ಸಾಮಾನ್ಯ ವರ್ಗಕ್ಕೆ ಹೆಚ್ಚಿನ ಮೀಸಲಾತಿ ಕಲ್ಪಿಸಿದೆ. ಈ ಬಗ್ಗೆ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ವಿಪಕ್ಷಗಳು ಎಚ್ಚರಿಕೆ ನೀಡಿದ್ದವು.
ಆ ನಿಟ್ಟಿನಲ್ಲಿ ಮಂಗಳವಾರ ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಕ್ಟೋಬರ್ 4ರಂದು ಹೊರಡಿಸಿದ್ದ ಮೀಸಲಾತಿ ಆದೇಶವನ್ನು ಹಿಂಪಡೆಯಲು ನಿರ್ಧರಿಸಿದೆ.
ನಿಗದಿಯಂತೆ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ಮತ್ತೊಂದು ಸುಗ್ರೀವಾಜ್ಞೆ ಹೊರಡಿಸಲು ಸರಕಾರ ನಿರ್ಧರಿಸಿದೆ ಎಂದು ಸಚಿವ ಸಂಪುಟ ಸಭೆಯ ನಂತರ ಸಚಿವ ವಿ.ಎಸ್.ಆಚಾರ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸಾಕಷ್ಟು ಆರೋಪ, ಆಕ್ಷೇಪಗಳು ಬಂದ ನಿಟ್ಟಿನಲ್ಲಿ ಈ ಹಿಂದೆ ಹೊರಡಿಸಿದ್ದ ಮೀಸಲಾತಿ ಸುಗ್ರೀವಾಜ್ಞೆ ಹಿಂಪಡೆಯುವ ಕಾರ್ಯಕ್ಕೆ ಮುಂದಾಗಿರುವುದಾಗಿ ಹೇಳಿದರು.