ನಗರದ ಎರಡನೇ ಹಂತದ 'ನಮ್ಮ ಮೆಟ್ರೊ' (51 ಕಿ.ಮೀ.) ಯೋಜನೆಯ ಯೋಜನಾ ವೆಚ್ಚದ ಹೆಚ್ಚಳಕ್ಕೆ ಮಂಗಳವಾರ ಸಂಜೆ ನಡೆದ ಸಚಿವ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ.
51 ಕಿ.ಮೀ. ಉದ್ದದ ಈ ಯೋಜನೆಗೆ ಒಟ್ಟು 14,774 ಕೋಟಿ ರೂಪಾಯಿ ವೆಚ್ಚ ಆಗಲಿದೆ. ಇದರಲ್ಲಿ ರಾಜ್ಯದ ಪಾಲು 5453 ಕೋಟಿ ರೂಪಾಯಿ ಇತ್ತು. ಆದರೆ, ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಅದರ ಅಂದಾಜು ವೆಚ್ಚ 6,395 ಕೋಟಿ ರೂಪಾಯಿಗೆ ಹೆಚ್ಚಾಗಿದ್ದು, ಇದಕ್ಕೆ ಅನುಮೋದನೆ ನೀಡಲಾಗಿದೆ ಎಂದು ಸಚಿವ ಸಂಪುಟ ಸಭೆ ನಂತರ ಸಚಿವ ವಿ.ಎಸ್.ಆಚಾರ್ಯ ಸುದ್ದಿಗಾರರಿಗೆ ತಿಳಿಸಿದರು.
ಬಾಕಿ ಉಳಿದ 8,379 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರ ಮತ್ತು ಜಪಾನ್ ಬ್ಯಾಂಕ್‌ನ ದೀರ್ಘಾವಧಿ ಸಾಲದ ಅವಧಿ ಮೇಲೆ ಪಡೆಯಲಾಗುವುದು ಎಂದು ಹೇಳಿದರು.
ಮೈಸೂರು ರಸ್ತೆ ಟರ್ಮಿನಲ್‌ನಿಂದ ಕೆಂಗೇರಿವರೆಗೆ (7.70ಕಿ.ಮೀ.), ಬೈಯಪ್ಪನಹಳ್ಳಿಯಿಂದ ಐಟಿಪಿಎಲ್‌ವರೆಗೆ (11.60ಕಿ.ಮೀ.), ತುಮಕೂರು ರಸ್ತೆಯ ಹೆಸರಘಟ್ಟ ಕ್ರಾಸ್‌ನಿಂದ ನೈಸ್ ರಸ್ತೆವರೆಗೆ (4.20ಕಿ.ಮೀ.), ಕನಕಪುರ ರಸ್ತೆಯ ಪುಟ್ಟೇನಹಳ್ಳಿ ಜಂಕ್ಷನ್‌ನಿಂದ ಅಂಜನಾಪುರ ಟೌನ್‌ಶಿಪ್ (6.70ಕಿ.ಮೀ.), ಬನ್ನೇರುಘಟ್ಟ ರಸ್ತೆಯ ಭಾರತೀಯ ನಿರ್ವಹಣಾ ಸಂಸ್ಥೆಯಿಂದ ನಾಗವಾರದವರೆಗೆ (21.10ಕಿ.ಮೀ.) 2ನೇ ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ವಿವರಿಸಿದರು.