ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ ನಮ್ಮನ್ನೆಲ್ಲಾ ಬಿಜೆಪಿಯು ಇನ್ನೂ ಪಕ್ಷದಿಂದ ಉಚ್ಚಾಟಿಸುತ್ತಿಲ್ಲವೇಕೆ? ದಯವಿಟ್ಟು ನಮ್ಮನ್ನು ಉಚ್ಚಾಟಿಸಿ ಬಿಡಿ. ನಮ್ಮ ಪಾಡಿಗೆ ನಾವು ಹೋಗಿಬಿಡುತ್ತೇವೆ ಎಂದು ಬಿಜೆಪಿಯಿಂದ ಬಂಡಾಯವೆದ್ದು ಈಗ ಮಾಜಿಗಳಾಗಿರುವ ಶಾಸಕರು ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಭಿನ್ನರ ಗುಂಪಿನ ನಾಯಕ ಬಾಲಚಂದ್ರ ಜಾರಕಿಹೊಳಿ, ಪತ್ರಿಕೆಗಳು ಮತ್ತು ಟಿವಿಗಳಲ್ಲಿ ಬಂದ ವರದಿಗಳನ್ನು ಆಧರಿಸಿ ನಮ್ಮನ್ನು ಅನರ್ಹಗೊಳಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಿದ್ದರೆ, ಪಕ್ಷದಿಂದ 6 ವರ್ಷ ಕಾಲ ಉಚ್ಚಾಟಿಸಬೇಕಿತ್ತು ಎಂದು ಅವರು ಹೇಳಿದರು.
ಶಾಸಕತ್ವ ಅನರ್ಹತೆಗೊಳಿಸಿದ ಸ್ಪೀಕರ್ ತೀರ್ಪಿಗೆ ಸಮ್ಮತಿ ನೀಡಿದ ರಾಜ್ಯ ಹೈಕೋರ್ಟ್ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಬುಧವಾರ ಅವರು ನವದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದರು. ಸುಪ್ರೀಂ ಕೋರ್ಟಿನಲ್ಲಿ ನಮ್ಮ ಪರ ತೀರ್ಪು ಬಂದರೆ, ಪಕ್ಷದಲ್ಲಿದ್ದುಕೊಂಡೇ ನಾಯಕತ್ವ ಬದಲಾವಣೆ ಮತ್ತು ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುತ್ತಿರುತ್ತೇವೆ. ಇಲ್ಲವಾದಲ್ಲಿ, ಮರಳಿ ಚುನಾವಣೆಗೆ ಸ್ಪರ್ಧಿಸುತ್ತೇವೆ ಎಂದವರು ಹೇಳಿದರು.
ಅನರ್ಹಗೊಳಿಸುವ ಬದಲಾಗಿ ಪಕ್ಷದಿಂದ ಉಚ್ಚಾಟಿಸಿದ್ದಿದ್ದರೆ, ಅವರ ಶಾಸಕ ಸ್ಥಾನವೂ ಉಳಿಯುತ್ತಿತ್ತು ಮತ್ತು ಶಾಸಕರ ಸವಲತ್ತುಗಳೂ ದೊರೆಯಬಹುದಾಗಿತ್ತು.