ತಾವೆಂದು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗೋಲ್ಲ. ಆ ಪ್ರಯತ್ನವನ್ನೂ ಮಾಡಿಲ್ಲ. ಬಿಜೆಪಿಯ ಕೆಲವು ನಾಯಕರು ತಮ್ಮನ್ನು ಸಂಪರ್ಕಿಸಿದ್ದು ನಿಜ. ತಾವು ಮಾತ್ರವಲ್ಲ, ಪ್ರತಿಪಕ್ಷದ ಎಲ್ಲ ಶಾಸಕರನ್ನು ಬಿಜೆಪಿ ಸಂಪರ್ಕಿಸಿ ಗಾಳ ಹಾಕುವ ಪ್ರಯತ್ನ ನಡೆಸಿತ್ತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಶಾಸಕ ಕೆ.ಬಿ. ಚಂದ್ರಶೇಖರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಸಂದರ್ಭದಲ್ಲೇ ನಾನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಆದರೆ, ವರಿಷ್ಠರು ಕಾಲ ಬರುವವರೆಗೂ ನೀವೇ ಮುಂದುವರಿಯಿರಿ ಎಂದು ಸೂಚಿಸಿದ್ದರಿಂದ ನಾನಿನ್ನೂ ಡಿಸಿಸಿ ಅಧ್ಯಕ್ಷರಾಗಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕಾವೇರಿ ಮಾತೆಗೆ ಮುಖ್ಯಮಂತ್ರಿ ಬಾಗಿನ ಸಲ್ಲಿಸುವ ಕಾರ್ಯಕ್ರಮಕ್ಕೆ ನಾನು ಹೋಗಿದ್ದರ ಹಿಂದೆ ಯಾವ ದುರುದ್ದೇಶವೂ ಇರಲಿಲ್ಲ. ಬಾಗಿನ ಸಲ್ಲಿಸುವುದು ಮಂಡ್ಯ ಮತ್ತು ಬೆಂಗಳೂರು ಜನತೆಗೆ ಹೆಮ್ಮೆಯ ಸಂಗತಿ. ಹೀಗಾಗಿ ಎಲ್ಲರೂ ಆ ಕಾರ್ಯಕ್ರಮಕ್ಕೆ ಹೋಗೋಣ. ಹೋರಾಟದ ವಿಷಯ ಬೇರೆ ಇರಲಿ ಎಂದು ಜಾ.ದಳದ ಶಾಸಕ ಮಿತ್ರರಿಗೆ ಹೇಳಿದ್ದೆ. ಆದರೆ, ಅವರು ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಹೇಳಿದರು ಎಂದು ತಿಳಿಸಿದರು.