ಜೀವನ ಶೈಲಿಯಿಂದಾಗಿ ವೃತ್ತಿ ರಂಗಭೂಮಿ ಮರೆಯಾಗುತ್ತಿದೆ: ಯಶವಂತ
ಹೊಸದುರ್ಗ, ಬುಧವಾರ, 10 ನವೆಂಬರ್ 2010( 17:54 IST )
ಇಂದಿನ ಬದಲಾದ ಜೀವನ ಶೈಲಿಯಿಂದಾಗಿ ವೃತ್ತಿ ರಂಗಭೂಮಿ ಮರೆಯಾಗುತ್ತಿದೆ ಎಂದು ರಂಗನಟ ಹಾಗೂ ನಿರ್ದೇಶಕ ಯಶವಂತ ಸರದೇಶಪಾಂಡೆ ಅಭಿಪ್ರಾಯವ್ಯಕ್ತಪಡಿಸಿದರು.
ತಾಲೂಕಿನ ಸಾಣೇಹಳ್ಳಿಯಲ್ಲಿ ಏರ್ಪಡಿಸಿರುವ ನಾಟಕೋತ್ಸವದಲ್ಲಿ 'ಕರ್ನಾಟಕದ ವೃತ್ತಿ ರಂಗಭೂಮಿಯ ಸವಾಲುಗಳು' ವಿಷಯದ ಕುರಿತು ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ವೃತ್ತಿ ನಾಟಕಗಳು ಗ್ರಾಮೀಣ ಜನರನ್ನು ಆಕರ್ಷಿಸುತ್ತಿದ್ದವು. ಕಾಲಚಕ್ರ ಉರುಳಿದಂತೆ ಚಲನಚಿತ್ರ ಹಾಗೂ ದೂರದರ್ಶನ ಮಾಧ್ಯಮಗಳಿಂದಾಗಿ ಆಕರ್ಷಣೆ ಕಳೆದುಕೊಂಡವು. ವೃತ್ತಿ ರಂಗಭೂಮಿಯ ನಟರಲ್ಲಿಯೂ ಬದ್ಧತೆ ಇಲ್ಲದಂತಾಗಿ ಕ್ರಮೇಣ ವೃತ್ತಿ ರಂಗಭೂಮಿ ಕ್ಷೀಣಿಸ ತೊಡಗಿತು ಎಂದರು.
ನೀನಾಸಂ, ರಂಗಾಯಣ, ಶಿವಸಂಚಾರದಂತಹ ತಂಡಗಳಿಗೆ ಸಂಸ್ಥೆಗಳ ಬಲವಿದೆ. ಆದ ಕಾರಣ ಅವುಗಳು ಭದ್ರವಾಗಿ ನೆಲೆಯೂರಿವೆ. ಸಂಸ್ಥೆಗಳ ಬಲವಿಲ್ಲದೆ ತಂಡಗಳನ್ನು ಕಟ್ಟಿ ಬೆಳೆಸುವುದು ಕಷ್ಟ ಎಂದರು. ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ವೃತ್ತಿರಂಗಭೂಮಿಯನ್ನು ಪುನಶ್ಚೇತನಗೊಳಿಸಲು ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.