ಮುಖ್ಯಮಂತ್ರಿ ಕಾರ್ಯಕ್ರಮದಂದು ಪ್ರತಿಭಟನೆ ಕೈ ಬಿಡುವುದಾಗಿ ಹೇಳಿದ್ದ ಜೆಡಿಎಸ್ ಈಗ ಉಲ್ಟಾ ಹೊಡೆದಿದೆ. ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದ ಭರವಸೆಗಳು ಈಡೇರದ್ದರಿಂದ, ನ.11ರಂದು ಜಿಲ್ಲಾ ಕ್ರೀಡಾಂಗಣ ಬಳಿ ಶಾಂತಿಯುತ ಪ್ರತಿಭಟಿಸುವುದಾಗಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸೋಮಣ್ಣ ನುಡಿದಂತೆ ನಡೆದಿಲ್ಲ. ಜಿಲ್ಲೆಗೆ 100 ಕೋಟಿ ರೂ. ನೀಡುವುದಾಗಿ ಹೇಳಿದ್ದು ಸುಳ್ಳಾಗಿದೆ. ಆದ್ದರಿಂದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದರು.
ಡಿಸಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಗೆ ಆಗಬೇಕಾದ ಕೆಲಸ, ಬಾಕಿ ಇರುವ ಕಾಮಗಾರಿ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಸೆಳೆಯಲಾಗಿತ್ತು. ಈ ಹಿಂದೆ ಸರಕಾರಕ್ಕೆ ಬರೆದಿದ್ದ ಪತ್ರಗಳ ಬಗ್ಗೆಯೂ ತಿಳಿಸಲಾಗಿತ್ತು. ಸಿಎಂ ಜತೆ ಮಾತನಾಡಿ ಕೂಡಲೇ 100 ಕೋಟಿ ರೂ. ಹಣ ಬಿಡುಗಡೆ ಮಾಡಿಸುವುದಾಗಿ ಹೇಳಿದ್ದ ಸಚಿವ ಸೋಮಣ್ಣ ಮಾತು ಹುಸಿಯಾಗಿದೆ ಎಂದ ಅವರು, ಕಳೆದ ಎರಡೂವರೆ ವರ್ಷದಿಂದ ಜಿಲ್ಲೆಯನ್ನು ನಿರ್ಲಕ್ಷಿಸಿರುವ ವಿಷಯವನ್ನು ಸಿಎಂ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.
ಭಾಗ್ಯಲಕ್ಷ್ಮಿ ಸಮಾವೇಶಕ್ಕೆ ಜನರನ್ನು ಕರೆತರಲು 500 ಬಸ್‌ಗಳನ್ನು ಬುಕ್ ಮಾಡಲಾಗಿದೆ. ಇದಕ್ಕೆಲ್ಲ ಕೊಡುತ್ತಿರುವುದು ಯಾರಪ್ಪನ ಹಣ ಎಂದು ಕಿಡಿ ಕಾರಿದ ರೇವಣ್ಣ, ಅಡುಗೆ ಭಟ್ಟರು, ಶಾಮಿಯಾನ ಸಮಾರಂಭಕ್ಕೆ ಸುಮಾರು 2 ಕೋಟಿ ರೂ. ದುಡ್ಡು ವೆಚ್ಚ ಮಾಡಲು ಹಣ ಎಲ್ಲಿಂದ ಬಂದಿದೆ ಎಂಬುದನ್ನು ತಿಳಿಸಲಿ ಎಂದು ಆಗ್ರಹಿಸಿದರು.