ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ಕ್ಷೇತ್ರದಲ್ಲಾದರೂ ಸ್ಪರ್ಧಿಸಬಹುದು. ಸಚಿವ ಮುರಗೇಶ ನಿರಾಣಿ ಬೀಳಗಿ ಕ್ಷೇತ್ರದ ಸಮಗ್ರ ಅಭಿವೃದ್ದಿಯನ್ನು ಪೂರ್ಣಗೊಳಿಸಿದ್ದರೆ ಬಬಲೇಶ್ವರ ಕ್ಷೇತ್ರಕ್ಕೆ ಬಂದು ಸ್ಪರ್ಧಿಸಲಿ ಅದನ್ನು ಸ್ವಾಗತಿಸುತ್ತೇನೆ. ಆದರೆ ಬಸವೇಶ್ವರ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವ ಬಗ್ಗೆ ಎಚ್ಚರಿಕೆ ನೀಡಲು ನಿರಾಣಿ ಯಾರು? ಎಂದು ಶಾಸಕ ಎಂ.ಬಿ.ಪಾಟೀಲ್ ಖಾರವಾಗಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವೇಶ್ವರ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವಂತೆ ಸಂಬಂಧಪಟ್ಟವರಿಗೆ 2 ಬಾರಿ ಎಚ್ಚರಿಕೆ ನೀಡಲಾಗಿದೆ ಎಂದು ಸಚಿವರು ಕೆಡಿಪಿ ಸಭೆ ನಂತರ ತಿಳಿಸಿದ್ದಾರೆ. ಈ ಕಾರ್ಖಾನೆ ಬಗ್ಗೆ ಪತ್ರ ಬರೆದು ಸಚಿವ ಸಂಪುಟದಲ್ಲಿ ತಡೆಹಿಡಿಯಲು ಮುಂದಾಗಿರುವುದು ಅವರೇ ಎಂಬುದನ್ನು ನಿರಾಣಿ ಮರೆತಿರಬಹುದು. ಹೀಗಿದ್ದಾಗ ನಮಗೆ ಎಚ್ಚರಿಕೆ ಕೊಡಲು ನಿರಾಣಿ ಯಾರೂ ಅಲ್ಲ ಎಂದು ತಿರುಗೇಟು ನೀಡಿದ ಅವರು, ಕಾರ್ಖಾನೆ ಕಾಮಗಾರಿಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಪ್ರಾರಂಭಿಸುತ್ತೇವೆ ಎಂದರು.
ಬಬಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿ ಶೇಗುಣಶಿ ಹಾಗೂ ಹಲಗಣಿ ಗ್ರಾಮಗಳಲ್ಲಿ ಕರ್ನಾಟಕ ಕೈಗಾರಿಕೆ ಅಭಿವೃದ್ಧಿ ಮಂಡಳಿಯು(ಕೆಐಡಿಬಿ) ಎಂಆರ್ಎನ್ ಶುಗರ್ಸ್ ಲಿ. ಹೆಸರಲ್ಲಿ ಭೂ ಸ್ವಾಧೀನಕ್ಕೆ ಮುಂದಾಗಿದೆ. ಇದು ಐಇಎಂ ಕಾಯಿದೆಗೆ ವಿರುದ್ಧವಾಗಿದೆ. ಎಂಆರ್ಎನ್ ಶುಗರ್ಸ್‌ನವರು ಕೇಂದ್ರ ಸರಕಾರದಿಂದ ಐಇಎಂ ಸ್ವೀಕೃತಿ ಪಡೆಯಲು ಕನಿಷ್ಠ ಸೌಲಭ್ಯಗಳನ್ನು ಹೊಂದಿಲ್ಲ. ಹಲಗಣಿಯಲ್ಲಿ ಉದ್ದೇಶಿತ ಎಂಆರ್ಎನ್ ಶುಗರ್ಸ್‌ನಿಂದ 3 ಕಿ.ಮೀ. ವ್ಯಾಪ್ತಿಯಲ್ಲಿ ಬಾಳೇಕುಂದ್ರಿಯವರ ಕಾರ್ಖಾನೆಯ ಪ್ರಸ್ತಾವನೆ ಇದೆ. ಕಾಯಿದೆ ಪ್ರಕಾರ ಒಂದು ಕಾರ್ಖಾನೆಯಿಂದ ಮತ್ತೊಂದು ಕಾರ್ಖಾನೆಗೆ 15 ಕಿ.ಮೀ. ಅಂತರವಿರಬೇಕು. ಆದರೆ, ಅಕಾರ ದುರ್ಬಳಕೆ ಮಾಡಿಕೊಂಡು ಭೂ ಸ್ವಾಧೀನಕ್ಕೆ ಮುಂದಾಗಿರುವುದು ತಪ್ಪು ಎಂದರು.