ದೇಶಭಕ್ತ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಕೆಟ್ಟ ಹೆಸರನ್ನು ತರಲು, ಯುಪಿಎ ಸರಕಾರ ಹಾಗೂ ಕಾಂಗ್ರೆಸ್ ಒಳಸಂಚು ನಡೆಸಿವೆ ಎಂದು ಆರ್‌ಎಸ್‌ಎಸ್ ನಾಯಕರು ಆರೋಪಿಸಿದ್ದಾರೆ.
ಅಜ್ಮಿರ್ ಸ್ಫೋಟ ಪ್ರಕರಣದಲ್ಲಿ ಆರ್‌ಎಸ್‌ಎಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್ ವಿರುದ್ಧ ಹುಸಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿ, ನೂರಾರು ಕಾರ್ಯಕರ್ತರು, ಬೆಂಬಲಿಗರು ಟೌನ್‌ಹಾಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರ ಮತ್ತು ಕಾಂಗ್ರೆಸ್ ಪಕ್ಷದ ಹುನ್ನಾರದ ವಿರುದ್ಧ ಕಿಡಿಕಾರಿದರು.
ದೇಶದಲ್ಲಿ ನಡೆದ ಸ್ಫೋಟ ಪ್ರಕರಣಗಳಿಗೆ ಆರ್‌ಎಸ್‌ಎಸ್ ನಾಯಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಇಂದ್ರೇಶ್ ಅಜ್ಮಿರ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ. ಕೇಂದ್ರ ಸರಕಾರದ ಒಳಸಂಚಿನ ವಿರುದ್ಧ ದೇಶಾದ್ಯಂತ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ಆರ್‌ಎಸ್‌ಎಸ್ ನಾಯಕರು ಎಚ್ಚರಿಸಿದ್ದಾರೆ.
ಆರ್‌ಎಸ್‌ಎಸ್ ಕಾರ್ಯಕರ್ತರ ಪ್ರತಿಭಟನೆಯಿಂದಾಗಿ ಟೌನ್‌ಹಾಲ್‌ನಿಂದ ಹಡ್ಸನ್ ಸರ್ಕಲ್ ವರೆಗಿನ ರಸ್ತೆಯ ಸಂಚಾರ ಅಸ್ತವ್ಯಸ್ತವಾಗಿತ್ತು.ಇದರಿಂದಾಗಿ ಜೆ.ಸಿ.ರೋಡ್, ಕೆಂಗಲ್ ಹನುಮಂತಯ್ಯ ರಸ್ತೆ, ರೆಸಿಡೆನ್ಸಿ ರಸ್ತೆ, ರಿಚಮಂಡ್ ರಸ್ತೆ ಕೆಂಪೆಗೌಡ ರಸ್ತೆ ಶೇಷಾದ್ರಿ ರಸ್ತೆ, ನೃಪತುಂಗಾ ರಸ್ತೆ ಅಂಬೇಡ್ಕರ್ ವೀದಿ, ಮಿಲ್ಲರ್ಸ್ ರಸ್ತೆ ಕನ್ನಿಂಗ್‌ಹಾಮ್ ರಸ್ತೆಗೆ ತೆರಳುವ ಪ್ರಯಾಣಿಕರು ಭಾರಿ ತೊಂದರೆಯನ್ನು ಅನುಭವಿಸಬೇಕಾಯಿತು.