ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಂದ ಮಳೆ ಹಾನಿಯ ವರದಿ ತರಿಸಿಕೊಂಡು ಪರಿಹಾರಕ್ಕೆ ಕೇಂದ್ರ ಸರಕಾರವನ್ನು ಒತ್ತಾಯಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಮಳೆ ಹಾನಿಗೊಳಗಾದ ಮಲ್ಲಾಪುರ, ಮಠದ ಕುರುಬರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿದ ನಂತರ ನಗರದ ಮುರುಘಾಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಳೆ ಹಾನಿಗೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ರಾಜ್ಯ ಸರಕಾರ ಸಾಧ್ಯವಾದಷ್ಟು ಪರಿಹಾರ ನೀಡಿ ನೆರವಾಗಲಿದೆ ಎಂದು ಭರವಸೆ ನೀಡಿದರು. ಜಿಲ್ಲೆಯಲ್ಲಿ ಒಂದು ವಾರ ಸುರಿದ ಮಳೆಗೆ 6 ಮಂದಿ ಮೃತಪಟ್ಟು, ಬೆಳೆ ನಾಶ, ಆಸ್ತಿಪಾಸ್ತಿಗೆ ಹಾನಿಯಾಗಿದ್ದು, ಒಟ್ಟು 35.72 ಕೋಟಿ ರೂ. ನಷ್ಟವಾಗಿದೆ. ಮನೆ ಕಳೆದುಕೊಂಡ ನಿರಾಶ್ರಿತರಿಗೆ ಸರಕಾರದಿಂದ ನಿವೇಶನ ನೀಡಿ, ಮನೆ ಕಟ್ಟಿಕೊಡಲಾಗುವುದು. ಈಗಾಗಲೇ ಮನೆ ಕಟ್ಟುವ ಕಾಮಗಾರಿ ಆರಂಭವಾಗಿದ್ದು, ಹದಿನೈದು ದಿನದಲ್ಲಿ ಸಂತ್ರಸ್ತರಿಗೆ ಸೂರು ದೊರೆಯಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸುರಿದ ಅನಿರೀಕ್ಷಿತ ಮಳೆಯಿಂದ ಉಂಟಾಗಿರುವ ಹಾನಿಯ ಬಗ್ಗೆ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಹಾನಿಗೀಡಾದ ಪ್ರದೇಕ್ಕೆ ಭೇಟಿ ಕೊಟ್ಟು ಶೀಘ್ರ ಪರಿಹಾರ ನೀಡಲು ಸರಕಾರ ಕಾರ್ಯೊನ್ಮುಖವಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು 155 ಮಿ.ಮೀ. ಮಳೆಯಾಗಿ ಸಾಕಷ್ಟು ಅನಾಹುತಗಳಾಗಿವೆ. ಜಿಲ್ಲಾಧಿಕಾರಿ ಅನಾಹುತ ತಡೆಯುವಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.