ಡಿ.31ರೊಳಗೆ ಕಲ್ಲಿದ್ದಲು ಮಾಫಿಯಾ ವರದಿ ಸಿದ್ದ: ಕರಂದ್ಲಾಜೆ
ರಾಯಚೂರು, ಗುರುವಾರ, 11 ನವೆಂಬರ್ 2010( 15:25 IST )
ಕಲ್ಲಿದ್ದಲು ಮಾಫಿಯಾ ತನಿಖೆ ಜವಾಬ್ದಾರಿಯನ್ನು ನ್ಯಾಯಾಧೀಶ ಮೋಹನ ಕುಮಾರ ನೇತೃತ್ವದ ಸಮಿತಿಗೆ ಒಪ್ಪಿಸಲಾಗಿದ್ದು, ಡಿಸೆಂಬರ್ 31ರೊಳಗೆ ವರದಿ ಸಲ್ಲಿಸಲು ಕಾಲಮಿತಿ ವಿಧಿಸಲಾಗಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಆರ್‌ಟಿಪಿಎಸ್‌ಗೆ ತೊಳೆದ ಕಲ್ಲಿದ್ದಲು ಪೂರೈಕೆಯಲ್ಲಿ ಮಾಫಿಯಾ ಕೈವಾಡವಿದ್ದು, ಭಾರಿ ಪ್ರಮಾಣದ ಹಣ ದುರ್ಬಳಕೆಯಾಗಿದೆ ಎಂಬ ಅನುಮಾನಗಳಿವೆ. ತನಿಖೆಗೆ ನೇಮಕವಾದ ನ್ಯಾಯಾಧೀಶರ ಸಮಿತಿಗೆ ಪರಿವರ್ತಕಗಳ ಖರೀದಿ ವ್ಯವಹಾರ ತಪಾಸಣೆ ಒಪ್ಪಿಸಿರುವ ಕಾರಣ ಗಡುವು ವಿಸ್ತರಣೆ ಮಾಡಲಾಗಿದೆ ಎಂದರು.
ತನಿಖಾ ವರದಿ ಬಂದ ನಂತರ ಆರ್‌ಟಿಪಿಎಸ್‌ಗೆ ತೊಳೆದ ಕಲ್ಲಿದ್ದಲು ತರಬೇಕೆ ? ಬೇಡವೆ ? ಎಂಬ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ಮೊದಲ ಮತ್ತು ಎರಡನೇ ಘಟಕ ಹಳೆಯದಾಗಿರುವ ಕಾರಣ ನವೀಕರಣ ಅಗತ್ಯವೆಂಬ ಭಾವನೆಯಿತ್ತು. ಆದರೆ, ಘಟಕದ ಸ್ಥಿರತೆ ಹಾಗೂ ಬಿಎಚ್ಇಎಲ್ ತಜ್ಞರ ಅಭಿಪ್ರಾಯದ ಪ್ರಕಾರ ನವೀಕರಣ ಅಗತ್ಯವಿಲ್ಲ. ಕಾರ್ಯಕ್ಷಮತೆಗೆ ಒತ್ತು ನೀಡಲು ಬೇಕಾದ ಸುಧಾರಣೆ ಕ್ರಮಗಳಿಗೆ ಗಮನಹರಿಸಲಾಗುವುದು.
ದೂರಗಾಮಿ ಯೋಜನೆ ಕೊರತೆಯಿಂದ ರಾಜ್ಯದಲ್ಲಿ ಬೇಡಿಕೆ ಹಾಗೂ ಉತ್ಪಾದನೆ ಅಂತರ ಹೆಚ್ಚಿದ್ದು, ಇದೇ ಸೆಪ್ಟೆಂಬರ್‌ನಿಂದ ಮುಂದಿನ ವರ್ಷದ ಮೇ ತನಕ 1000 ಮೆಗಾ ವ್ಯಾಟ್ ವಿದ್ಯುತ್ ಖರೀದಿ ಒಡಂಬಡಿಕೆ ಅನಿವಾರ್ಯವಾಯಿತು. ಉತ್ಪಾದನೆಯಡೆಗೆ ಆದ್ಯತೆ ನೀಡಿದಂತೆ ಬಳಕೆಯಲ್ಲೂ ಕಟ್ಟುನಿಟ್ಟಿನ ಕ್ರಮ ಹಾಗೂ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಬದಲಾವಣೆಯಾಗಬೇಕಾಗಿದೆ. ಸಿಎಫ್ಎಲ್ ಹಾಗೂ ಎಲ್ಇಡಿ ಬಲ್ಬ್‌ಗಳ ಬಳಕೆಗೆ ಪ್ರಾಶಸ್ತ್ಯ, 'ಬೆಳಕು' ಯೋಜನೆ ಮೂಲಕ ಪ್ರತಿದಿನ 500 ಮೆಗಾ ವ್ಯಾಟ್ ವಿದ್ಯುತ್ ಉಳಿತಾಯವಾಗಲಿದೆ. ಸಾಗಣೆ ಮತ್ತು ವಿತರಣೆ ನಷ್ಟದ ಪ್ರಮಾಣ ಶೇ.22ರಷ್ಟಿದ್ದು, ಮುಂದಿನ ಮಾರ್ಚ್ ವೇಳೆಗೆ ಶೇ.20ಕ್ಕೆ ಇಳಿಸುವ ಗಡುವು ನೀಡಲಾಗಿದೆ. ಪರಿವರ್ತಕಗಳ ತ್ವರಿತ ದುರಸ್ತಿಗೆಂದು ಗ್ರಾಮ ಸಮಿತಿ ರಚಿಸಲು ನಿರ್ಧರಿಸಿದೆ ಎಂದು ಹೇಳಿದರು.