ವೆಂಕಟಸುಬ್ಬಯ್ಯಗೆ ಅಧ್ಯಕ್ಷ ಪಟ್ಟ: ತವರೂರು ಮಂಡ್ಯದಲ್ಲಿ ಸಂಭ್ರಮ
ಮಂಡ್ಯ, ಗುರುವಾರ, 11 ನವೆಂಬರ್ 2010( 15:28 IST )
ಅಖಿಲ ಭಾರತ 77ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರನ್ನು ಆಯ್ಕೆ ಮಾಡಿರುವುದಕ್ಕೆ ತವರು ಜಿಲ್ಲೆ ಮಂಡ್ಯದಲ್ಲಿ ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಡೆದಾಡುವ ನಿಘಂಟು ಎಂದೇ ಮನೆ ಮಾತಾಗಿರುವ ವೆಂಟಕಸುಬ್ಬಯ್ಯ ಅವರು ಮೂಲತಃ ಶ್ರೀರಂಗಪಟ್ಟಣದ ಗಂಜಾಂನವರು. ಕಾವೇರಿ ನದಿ ತೀರದ ಗಂಜಾಂನಲ್ಲಿ ಅವರು ತಮ್ಮ ಬಾಲ್ಯ ಕಳೆದವರು.
ತವರು ಜಿಲ್ಲೆ ಮಂಡ್ಯದ ಜತೆಗೆ ಅಷ್ಟಾಗಿ ನಂಟು ಇಟ್ಟುಕೊಂಡವರಲ್ಲ. ಆದರೂ ಅವರು ನಮ್ಮವರೆನ್ನುವ ಅಭಿಮಾನ ಮಂಡ್ಯದ ಜನತೆಯದು. ವೆಂಕಟಸುಬ್ಬಯ್ಯ ಅವರಿಗೆ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ ದೊರೆತಿರುವುದಕ್ಕೆ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಸ್. ಮುದ್ದೇಗೌಡ, ಪದಾಧಿಕಾರಿಗಳು, ಸಾಹಿತಿಗಳು, ಸಾಹಿತ್ಯಾಸಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ.
ವೆಂಕಟಸುಬ್ಬಯ್ಯನವರ ಆಯ್ಕೆ ಮೂಲಕ ಮಂಡ್ಯ ಜಿಲ್ಲೆಗೆ 6ನೇ ಬಾರಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಒಲಿದ ಹೆಗ್ಗಳಿಕೆ ದೊರೆತಿದೆ. ಜಿಲ್ಲೆಯ ಬಿ.ಎಂ. ಶ್ರೀಕಂಠಯ್ಯ, ಎ.ಎನ್. ಮೂರ್ತಿರಾವ್, ಕೆ.ಎಸ್. ನರಸಿಂಹಸ್ವಾಮಿ, ಡಾ.ಎಚ್.ಎಲ್. ನಾಗೇಗೌಡ, ಪು.ತಿ. ನರಸಿಂಹಾಚಾರ್ ಈ ಹಿಂದೆ ಸಮ್ಮೇಳನಾಧ್ಯಕ್ಷರಾಗಿದ್ದರು.