ತಮ್ಮ ಕ್ಷೇತ್ರಕ್ಕೆ ಅನುದಾನ ತರಲು ಸಚಿವರೊಬ್ಬರಿಗೆ ಲಂಚ ನೀಡಿರುವುದಾಗಿ ಹೇಳಿರುವ ನಾಗಮಂಗಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುರೇಶ್ ಗೌಡ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಂಚ ನೀಡುವುದು ಮತ್ತು ತೆಗೆದುಕೊಳ್ಳುವುದು ಎರಡೂ ಅಪರಾಧ. ಸುರೇಶ್ ಗೌಡ ಲಂಚ ನೀಡಿರುವುದಾಗಿ ತಾವೇ ಹೇಳಿಕೊಂಡಿದ್ದಾರೆ. ಹಾಗಾಗಿ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಗೃಹ ಸಚಿವರನ್ನು ಒತ್ತಾಯಿಸುವುದಾಗಿ ಹೇಳಿದರು.
ಲಂಚ ನೀಡಿರುವುದು ಯಾರಿಗೆ. ಯಾರು ತೆಗೆದುಕೊಂಡಿದ್ದಾರೆ ಈ ಎಲ್ಲ ಅಂಶಗಳ ಬಗ್ಗೆ ತನಿಖೆ ಆಗಬೇಕು. ಅದಾದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದ ಈಶ್ವರಪ್ಪ, ಲಂಚ ನೀಡಿ ಅನುದಾನ ಪಡೆಯುವ ಪರಿಸ್ಥಿತಿ ಇಲ್ಲ ಎಂದರು.
ಮೀಸಲು ಪ್ರಮಾಣ ಶೇ.50 ದಾಟಬಾರದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಹಾಗಾಗಿ ಜಿ.ಪಂ. ಮತ್ತು ತಾ.ಪಂ. ಮೀಸಲಾತಿಯನ್ನು ಹಿಂದಕ್ಕೆ ತೆಗೆದುಕೊಂಡಿದೆ. ಪರಿಶಿಷ್ಟರು ಮತ್ತು ಹಿಂದುಳಿದವರಿಗೆ ಅನ್ಯಾಯ ಆಗದಂತೆ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಲಿದೆ. ಒಂದು ವೇಳೆ ಪ್ರತಿಪಕ್ಷಗಳು ಈ ವಿಷಯದಲ್ಲಿ ನ್ಯಾಯಾಲಯದ ಮೆಟ್ಟಿಲೇರಿದರೆ, ನಾವೂ ಸಹ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.
ಜಿ.ಪಂ. ಮತ್ತು ತಾ.ಪಂ.ಚುನಾವಣೆಗಾಗಿ ಬಿಜೆಪಿ ಕಳೆದ 6 ತಿಂಗಳಿನಿಂದ ತಯಾರಿ ನಡೆಸಿದೆ. ಅಂತಹುದರಲ್ಲಿ ಚುನಾವಣೆಯನ್ನು ಮುಂದೂಡುವ ಪ್ರಶ್ನೆಯೇ ಇಲ್ಲ. ಆದಷ್ಟು ಬೇಗ ಹೊಸ ಮೀಸಲಾತಿ ಘೋಷಿಸಿ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.