ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಫ್ರಾನ್ಸ್‌ನಲ್ಲಿ ಸಾವರ್ಕರ್ ಸ್ಮಾರಕ; ಕೇಂದ್ರಕ್ಕೆ ಸಿಎಂ ಒತ್ತಡ (Savarkar | France | memorial | Marseilles | Karnataka | Manmohan Singh,)
ಫ್ರಾನ್ಸ್‌ನಲ್ಲಿ ಸಾವರ್ಕರ್ ಸ್ಮಾರಕ; ಕೇಂದ್ರಕ್ಕೆ ಸಿಎಂ ಒತ್ತಡ
ಬೆಂಗಳೂರು, ಗುರುವಾರ, 11 ನವೆಂಬರ್ 2010( 17:53 IST )
ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಸ್ಮಾರಕವನ್ನು ಫ್ರಾನ್ಸ್‌ನ ಮಾರ್ಸೆಲ್ಸ್‌ನಲ್ಲಿಶೀಘ್ರವೇ ಪೂರ್ಣಗೊಳಿಸಲು ಒತ್ತಡ ಹೇರಬೇಕೆಂದು ರಾಜ್ಯದ ಬಿಜೆಪಿ ಸರಕಾರ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ 1910 ಮಾರ್ಚ್ 13ರಂದು ಅವರ ವಿರುದ್ಧ ಬಂಧನದ ವಾರಂಟ್ ಹೊರಡಿಸಲಾಗಿತ್ತು. ಆಗ ಅವರನ್ನು ಲಂಡನ್‌ನಲ್ಲಿ ಬಂಧಿಸಿ ಮಾರ್ಸೆಲ್ಸ್‌ನಿಂದ ಹಡಗಿನಲ್ಲಿ ಕರೆತರುತ್ತಿರುವ ಸಂದರ್ಭದಲ್ಲಿ ಸಮುದ್ರಕ್ಕೆ ಹಾರಿ ಪರಾರಿಯಾಗುವ ಅವರ ಧೀರ ಯತ್ನವನ್ನು ವಿಫಲಗೊಳಿಸಲಾಯಿತು. ನಂತರ ಅವರನ್ನು ಹಿಡಿದು ಮುಂಬೈಗೆ ಎಸ್.ಎಸ್.ಮೊರಿಯಾ ಹಡಗಿನಲ್ಲಿ ಕರೆತಂದು ಯೆರವಾಡ ಜೈಲಿನಲ್ಲಿ ಇರಿಸಲಾಗಿತ್ತು. ಅವರ ವಿರುದ್ಧ ದಾಖಲಾಗಿದ್ದ ಮೊಕದ್ದಮೆಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, 50 ವರ್ಷಗಳ ಕಾರಾಗೃಹ ಶಿಕ್ಷೆ (ಅಂಡಮಾನ್ ಜೈಲಿನಲ್ಲಿ) ವಿಧಿಸಿತ್ತು.
ಈ ಸ್ವಾತಂತ್ರ್ಯ ಹೋರಾಟಗಾರ ಬಂಧನದ ಸಂದರ್ಭದಲ್ಲಿ ಸಮುದ್ರಕ್ಕೆ ಹಾರಿದ ಐತಿಹಾಸಿಕ ದಿನದ ಶತಮಾನೋತ್ಸವ ಈ ವರ್ಷ ನಡೆಯಲಿರುವ ಹಿನ್ನೆಲೆಯಲ್ಲಿ ಫ್ರಾನ್ಸ್‌ನ ಮಾರ್ಸೆಲ್ಸ್‌ನಲ್ಲಿ ಸಾವರ್ಕರ್ ಸ್ಮಾರಕ ನಿರ್ಮಾಣ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ವಿನಾಯಕ ದಾಮೋದರ್ ಸಾವರ್ಕರ್ ಅವರ ಸ್ಮಾರಕ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಸರಕಾರ, ಕೇಂದ್ರ ಸರಕಾರ ಕೂಡಲೇ ಫ್ರಾನ್ಸ್ ಸರಕಾರದ ಮೇಲೆ ಒತ್ತಡ ಹೇರಬೇಕೆಂದು ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಲಂಡನ್‌ನಿಂದ ಭಾರತಕ್ಕೆ ಕರೆತಂದು ಸಾವರ್ಕರ್ ಅವರ ವಿಚಾರಣೆ ನಡೆಸಲಾಗಿತ್ತು. ಇದೀಗ ಜುಲೈ 8ರಂದು ಸಾವರ್ಕರ್ ಅವರ ಐತಿಹಾಸಿಕ ಸಾಧನೆಯ ಶತಮಾನೋತ್ಸವವನ್ನು ಆಚರಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಸಾವರ್ಕರ್ ಅವರ ಸ್ಮಾರಕ ಕಾರ್ಯವನ್ನು ವಿಳಂಬ ಮಾಡುತ್ತಿರುವ ಬಗ್ಗೆ ರಾಜ್ಯಾದ್ಯಂತ ಅಸಮಾಧಾನ ವ್ಯಕ್ತವಾಗುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಫ್ರಾನ್ಸ್ ಸರಕಾರ ಜುಲೈ 8ರೊಳಗೆ ಸಾವರ್ಕರ್ ಸ್ಮಾರಕ ಕಾರ್ಯವನ್ನು ಪೂರ್ಣಗೊಳಿಸುವಂತೆ ಯಡಿಯೂರಪ್ಪ ಆಗ್ರಹಿಸಿದ್ದಾರೆ.