ನಿಧಿ ಪಡೆಯುವ ದುರಾಸೆಯಿಂದ ತನ್ನದೇ ಕರುಳಕುಡಿಯನ್ನು ಜೀವಂತವಾಗಿ ಹೂಳಲು ಪ್ರಯತ್ನಿಸುತ್ತಿದ್ದ ಕಿರಾತಕ ತಂದೆ ಸಹಿತ ಏಳು ಮಂದಿಯನ್ನು ಬಂಧಿಸಿ, ಬಾಲಕನನ್ನು ರಕ್ಷಿಸಲಾಗಿದೆ. ಇದು ನಡೆದದ್ದು ಬೇರೆಲ್ಲೂ ಅಲ್ಲ, ಕರ್ನಾಟಕದ ಯಾದಗಿರಿ ಜಿಲ್ಲೆಯ ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ.
11 ವರ್ಷದ ಏನೂ ಅರಿಯದ ಮುಗ್ಧ ಹುಡುಗ ಇಮಾಮುದ್ದೀನ್ ಎಂಬಾತನ ತಂದೆ ದಾವುಲ್ ಸಾಬ್ ಅಮೀಲ್ ಸಾಬ್ ಎಂಬಾತನ ಸಹಿತ ಏಳು ಮಂದಿಯನ್ನು ಬಂಧಿಸಲಾಗಿದೆ. ಈ ಕುರಿತು ಮಾಹಿತಿ ಪಡೆದಿದ್ದ ಪೊಲೀಸರು, ಸುರಪುರ ತಾಲೂಕಿನ ರಾಯನಗೋಳ ಎಂಬಲ್ಲಿಗೆ ದಾಳಿ ನಡೆಸಿ, ಬಲಿ ಕೊಡಲು ಎಲ್ಲ ಸಿದ್ಧತೆ ನಡೆಸುತ್ತಿದ್ದ ಸ್ಥಳದಿಂದ ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರು ಅಲ್ಲಿಗೆ ತಲುಪುವುದು ಹತ್ತು ನಿಮಿಷ ತಡವಾಗಿದ್ದರೂ ಈ ಪುಟಾಣಿಯನ್ನು ಜೀವಂತವಾಗಿ ಸಮಾಧಿ ಮಾಡಲಾಗುತ್ತಿತ್ತು. ಸೂರ್ಯೋದಯದ ವೇಳೆಗೇ ಬಾಲಕನನ್ನು ಬಲಿಕೊಡಲು ತೀರ್ಮಾನಿಸಲಾಗಿತ್ತು. ಒಂದು ಚಾಕು, ಒಂದು ಹರಿತವಾದ ಕತ್ತಿ ಮತ್ತಿತರ ವಸ್ತುಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ.
ಸ್ಥಳೀಯ ಗ್ರಾಮಸ್ಥರು ಈ ಬಂಧನಕ್ಕೆ ಸಹಾಯ ಮಾಡಿದ್ದರು. ಹಟ್ಟಿಯ ಚಿನ್ನದ ಗಣಿಯ ಊರಿನವನಾದ ಮಂತ್ರವಾದಿ ಬಾಜಿ ಬಾಬಾ ಎಂಬಾತ ದಾವುಲ್ ಸಾಬ್‌ಗೆ ಸಲಹೆ ನೀಡಿ, ನಿನ್ನ ಹೊಲದಲ್ಲಿ ನಿಧಿ ಇದೆ, ಅದು ಬೇಕಿದ್ದರೆ ನಿನ್ನ ಮಗನನ್ನು ನರಬಲಿ ಕೊಡಬೇಕು, ಹಾಗಿದ್ದರೆ ಗುಪ್ತವಾಗಿದ್ದ ಈ ನಿಧಿ ನಿನಗೆ ದಕ್ಕುತ್ತಿದೆ ಎಂದಿದ್ದ.
ಈ ಬಾಜಿ ಬಾಬಾನ ಮಾತು ನಂಬಿದ ದಾವುಲ್, ನರಬಲಿ ನೀಡಲು ಆರಿಸಿದ್ದು ತನ್ನ ಮೊದಲನೇ ಹೆಂಡತಿ ಶರೀಫಾಬಿಯ ಮಗನನ್ನು. ಆದರೆ ಏಳನೇ ತರಗತಿಯಲ್ಲಿದ್ದ ಈ ಏನೂ ಅರಿಯದ ಮುಗ್ಧ ಪುಟಾಣಿ ಇಮಾಮುದ್ದೀನ್ ರಕ್ಷಣೆ ಆಗಿದ್ದು ಆತ ನಂಬಿದ ದೇವರಾದ ಅಲ್ಲಾಹ್‌ನಿಂದ. ಈ ನರಬಲಿಗೆ ದಾವುಲ್ ಸಾಬ್‌ನ ಎರಡನೇ ಪತ್ನಿ ಮತ್ತು ಶರೀಫಾಬಿಯ ಸಹೋದರಿಯೇ ಆಗಿರುವ ಬಿಯಾಮಾ ಕೂಡ ಬೆಂಬಲ ನೀಡಿದ್ದಳು ಎಂದು ಮೂಲಗಳು ಹೇಳಿವೆ.
ಮಂತ್ರವಾದಿ, ಈ ಬಾಲಕನ ಅಪ್ಪನ ಸಹಿತ ಏಳು ಮಂದಿ ಇದೀಗ ಕಂಬಿ ಎಣಿಸುತ್ತಿದ್ದಾರೆ.