ಕಳೆದ ಎರಡು ತಿಂಗಳ ಹಿಂದೆ ಉತ್ತರ ಕರ್ನಾಟಕದ ಅಣ್ಣಿಗೇರಿಯಲ್ಲಿ ನೂರಾರು ತಲೆಬುರುಡೆ ದೊರೆತ ಪ್ರಕರಣ ಸಾಕಷ್ಟು ಕುತೂಲಕ್ಕೆ ಎಡೆಮಾಡಿಕೊಟ್ಟಿತ್ತು. ಆದರೆ ಇದೀಗ ತಲೆಬುರುಡೆ ರಸಹ್ಯ ಭೇದಿಸುವಲ್ಲಿ ಹೈದರಾಬಾದ್‌ನ ಸಿಡಿಎಫ್‌ಡಿ ವಿಫಲವಾಗುವ ಮೂಲಕ ಕೈಚೆಲ್ಲಿದೆ.
ನವಲಗುಂದದ ಅಣ್ಣಿಗೇರಿಯಲ್ಲಿ ದೊರೆತ ನೂರಾರು ತಲೆಬುರುಡೆಗಳಲ್ಲಿ ಮೂರನ್ನು ಕಿಮ್ಸ್ ವೈದ್ಯರು ಪರೀಕ್ಷೆ ನಡೆಸಿದ್ದರು. ಆದರೆ ತಲೆ ಬುರುಡೆಗೆ ಸಂಬಂಧಿಸಿದಂತೆ ನಿಖರವಾದ ಕಾಲಘಟ್ಟ ತಿಳಿಯಲು ಅದನ್ನು ಹೈದರಾಬಾದ್‌ನ ಡಿಎನ್ಎ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಇದೀಗ ಎರಡು ತಿಂಗಳು ಕಳೆದರು ಕೂಡ ತಲೆಬುರುಡೆಯ ವಯಸ್ಸಾಗಲಿ, ಅದರ ಹಿಂದಿನ ರಹಸ್ಯ ಭೇದಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ತಲೆ ಬುರುಡೆಗೆ ಸಂಬಂಧಿಸಿದಂತೆ ಕಾರ್ಬನ್ 14 ಡೇಟಿಂಗ್ ಟೆಸ್ಟ್ ಮಾಡಲು ಅಸಾಧ್ಯ, ಇದಕ್ಕೆ ರಕ್ತದ ಸ್ಯಾಂಪಲ್ ಅಗತ್ಯವಿದೆ ಎಂದು ಹೈದರಬಾದ್ ಸಿಡಿಎಫ್‌ಡಿ ತಜ್ಞರು ಧಾರವಾಡ ಜಿಲ್ಲಾಧಿಕಾರಿ ದರ್ಪಣ್ ಜೈನ್ ಅವರಿಗೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಿದ್ದಾರೆ.
ಅಣ್ಣಿಗೇರಿಯಲ್ಲಿ ದೊರೆತ ನೂರಾರು ತಲೆಬುರುಡೆ ಸಾರ್ವಜನಿಕರು, ಇತಿಹಾಸ ತಜ್ಞರು ಸೇರಿದಂತೆ ಎಲ್ಲರಲ್ಲೂ ಸಾಕಷ್ಟು ಕುತೂಹಲ ಹುಟ್ಟುಹಾಕಿತ್ತು. ಆ ನೆಲೆಯಲ್ಲಿ ತಲೆಬುರುಡೆ ಹಿಂದಿನ ರಹಸ್ಯ ಏನು ಎಂದು ತಿಳಿಯಲು ಹೈದರಾಬಾದ್‌ಗೆ ಕಳುಹಿಸಲಾಗಿದೆ. ಆ ವರದಿ ಬಂದ ನಂತರ ಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ದರ್ಪಣ್ ಜೈನ್ ಘಟನೆ ನಡೆದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದರು.
ಆದರೆ ಇದೀಗ ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಹೈದರಾಬಾದ್ ಪ್ರಯೋಗಾಲಯದ ತಜ್ಞರೇ ಕೈಚೆಲ್ಲುವ ಮೂಲಕ ಕೊನೆಗೂ ಬುರುಡೆ ರಹಸ್ಯ ಬಯಲಾಗದೆ ಉಳಿಯುವಂತಾಗಿದೆ.
ಭುವನೇಶ್ವರದಲ್ಲಿ ಮತ್ತೊಂದು ಪರೀಕ್ಷೆ: ಇದೀಗ ಬುರುಡೆ ರಹಸ್ಯ ತಿಳಿಯಲು ಭುವನೇಶ್ವರದ ಡಿಎನ್ಎ ಪ್ರಯೋಗಾಲಯಕ್ಕೆ ಕಳುಹಿಸಲು ಜಿಲ್ಲಾಡಳಿತ ಮುಂದಾಗಿದೆ. ಹೈದರಾಬಾದ್ ಡಿಎನ್ಎ ಕೇಂದ್ರ ಬುರುಡೆ ರಹಸ್ಯ ಹೊರಹಾಕುವಲ್ಲಿ ಕೈಚೆಲ್ಲಿದ ಪರಿಣಾಮ, ಭುವನೇಶ್ವರ ಡಿಎನ್ಎ ಪ್ರಯೋಗಾಲಯಕ್ಕೆ ಕಳುಹಿಸುವ ನಿರ್ಧಾರಕ್ಕೆ ಬಂದಿರುವುದಾಗಿ ಜಿಲ್ಲಾಧಿಕಾರಿ ದರ್ಪಣ್ ಜೈನ್ ತಿಳಿಸಿದ್ದಾರೆ.