ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ವಿರುದ್ಧ ವಾಚಾಮಗೋಚರವಾಗಿ ವಾಗ್ದಾಳಿ ನಡೆಸಿರುವ ಆರ್ಎಸ್ಎಸ್ ಮಾಜಿ ಮುಖ್ಯಸ್ಥ ಕೆ.ಎಸ್.ಸುದರ್ಶನ್ ಅವರನ್ನು ಕೂಡಲೇ ಆರ್ಎಸ್ಎಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಶುಕ್ರವಾರ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೋನಿಯಾ ಗಾಂಧಿ ವಿರುದ್ಧ ಸುದರ್ಶನ್ ಬಾಯಿಗೆ ಬಂದಂತೆ ಟೀಕಿಸಿದ್ದಾರೆ. ಇದು ಆರ್ಎಸ್ಎಸ್ ಕೀಳುಮಟ್ಟದ ಭಾಷೆಯನ್ನು ತೋರ್ಪಡಿಸಿದಂತಾಗಿದೆ ಎಂದು ಆಕ್ರೋಶವ್ಯಕ್ತಪಡಿಸಿದರು. ಸುದರ್ಶನ್ ಅವರ ಹೇಳಿಕೆಯನ್ನು ಖಂಡಿಸಿ ಶನಿವಾರ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಭೋಪಾಲದಲ್ಲಿ ಕೇಂದ್ರ ಸರಕಾರದ ವಿರುದ್ಧ ಏರ್ಪಡಿಸಲಾಗಿದ್ದ ಪ್ರತಿಭಟನಾ ಧರಣಿಯ ನಂತರ ಸುದ್ದಿಗಾರರೊಂದಿಗೆ ಮುಖಾಮುಖಿ ಕಾರ್ಯಕ್ರಮದಲ್ಲಿ ಸುದರ್ಶನ್ ಅವರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯನ್ನು ಸೋನಿಯಾಗಾಂಧಿಯವರೇ ಕೊಲ್ಲಿಸಿದ್ದರು ಎಂದು ಗಂಭೀರವಾಗಿ ಆಪಾದಿಸಿದ್ದರು.
ಅಷ್ಟೇ ಅಲ್ಲ, ಸೋನಿಯಾ ಅಮೆರಿಕದ ಸಿಐಎ ಏಜೆಂಟ್ ಎಂದು ದೂರಿ, ಆಕೆ ಅಕ್ರಮ ಸಂತಾನ ಎಂದು ಜರೆದಿದ್ದರು. ಈ ಸುದ್ದಿ ದೈನಿಕ ಭಾಸ್ಕರದಲ್ಲಿ ಪ್ರಕಟವಾಗಿದ್ದು, ಗುರುವಾರ ಸಂಸತ್ತಿನಲ್ಲಿಯೂ ಸಾಕಷ್ಟು ಕೋಲಾಹಲಕ್ಕೆ ಎಡೆಮಾಡಿಕೊಟ್ಟಿತ್ತು.