ಜಿಲ್ಲೆಯಲ್ಲಿ ಬಿಜೆಪಿಯ ಚರಮಗೀತೆ ಹಾಡಲು ಕಾಂಗ್ರೆಸ್ ಕಾರ್ಯಕರ್ತರು ಸನ್ನದ್ಧರಾಗಬೇಕೆಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕರೆ ನೀಡಿದ್ದಾರೆ.
ವೀರಶೈವ ಕಲ್ಯಾಣ ಮಂದಿರದ ಎಸ್.ನಿಜಲಿಂಗಪ್ಪ ಸಭಾಂಗಣದಲ್ಲಿ ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಎದುರು ಬಹುದೊಡ್ಡ ಸವಾಲು ಇದೆ. ಒಂದು ಕಾಲದಲ್ಲಿ ವೈಭವದ ದಿನಗಳನ್ನು ಕಂಡಿದ್ದ ಪಕ್ಷ ಈಗ ಸಂಕಷ್ಟದ ದಿನಗಳನ್ನು ಎದುರಿ ಸುತ್ತಿದೆ. ಇದರಿಂದ ಹೊರಬರಲು ಉತ್ತಮ ಅವಕಾಶ ಲಭಿಸಿದೆ. ಪಕ್ಷಕ್ಕೆ ಕಾರ್ಯಕರ್ತರ ಕೊರತೆ ಇಲ್ಲ, ಅವರನ್ನೆಲ್ಲಾ ಮತ್ತೆ ಒಗ್ಗೂಡಿಸುವ ಕೆಲಸ ಮಾಡಬೇಕು. ಜನ ಸಾಮಾನ್ಯರ ಕಷ್ಟ ಮತ್ತು ಬೇಡಿಕೆಗಳಿಗೆ ಸ್ಪಂದಿಸುವುದೇ ದೇವರ ಪೂಜೆ. ದೇವರ ಪೂಜೆ ಮೂಲಕ ಜನತೆಯ ವಿಶ್ವಾಸ ಗಳಿಸಿ ಪಕ್ಷದ ಬಲವರ್ಧನೆ ಮಾಡಬೇಕೆಂದರು.
ಬಿಜೆಪಿ ಧರ್ಮ, ಜಾತಿ, ಭಾಷೆಗಳ ನಡುವೆ ವಿಷ ಬೀಜ ಬಿತ್ತಿ ಮೇಲೆ ಬಂದಿದೆ. ಆದರೆ ಕಾಂಗ್ರೆಸ್ ಜಾತ್ಯತೀತ ಮತ್ತು ಸಮಾನತೆಯ ತತ್ವದ ಆಧಾರದ ಮೇಲೆ ನಿಂತಿದೆ. ಎಲ್ಲ ಜಾತಿ ಧರ್ಮಗಳ ನಡುವೆ ಸಮಾನತೆಯ ತತ್ವ ಸಾರುವುದೇ ಪಕ್ಷದ ಉದ್ದೇಶ ಎಂದರು.
ಇಬ್ಬರು ಮಹಾನ್ ಸಿಡುಕರು ಬಿಜೆಪಿ ಸರಕಾರದ ನೊಗ ಹೊತ್ತಿದ್ದಾರೆ. ಒಬ್ಬರಿಗೊಬ್ಬರು ಕಾಲೆಳೆಯುವ ಪ್ರಯತ್ನದಲ್ಲಿರುವುದರಿಂದ ಬಿಜೆಪಿ ಸರಕಾರ ಯಾವಾಗ ಬೀಳುತ್ತದೆ ಎಂಬುದೇ ಗೊತ್ತಿಲ್ಲ. ಕೊಪ್ಪರಿಗೆಯಷ್ಟು ದ್ವೇಷ ಅಸೂಯೆ ತುಂಬಿಕೊಂಡಿರುವ ನಾಯಕರಿಂದ ಉತ್ತಮ ಆಡಳಿತ ನಿರೀಕ್ಷೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.