ಮೀಸಲಾತಿಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ಅಂಕಿತ ಹಾಕದೆ ವಾಪಸ್ ಕಳುಹಿಸಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮೀಸಲಾತಿ ಸುಗ್ರೀವಾಜ್ಞೆ ಪ್ರಸ್ತಾವನೆಯನ್ನು ರಾಜ್ಯಪಾಲರಿಗೆ ಕಳುಹಿಸಲು ಶುಕ್ರವಾರ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದೆ.
ಅಕ್ಟೋಬರ್ 4ರಂದು ರಾಜ್ಯ ಸರಕಾರ ಮೀಸಲಾತಿ ಕುರಿತು ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೆ ಮೀಸಲಾತಿ ಸುಗ್ರೀವಾಜ್ಞೆಯಲ್ಲಿ ಹಿಂದುಳಿದ ವರ್ಗದವರನ್ನು ಕಡೆಗಣಿಸಲಾಗಿದೆ ಎಂದು ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
ಏತನ್ಮಧ್ಯೆ ವಿಪಕ್ಷಗಳ ಒತ್ತಡಕ್ಕೆ ಮಣಿದ ರಾಜ್ಯ ಸರಕಾರ ಮೀಸಲಾತಿ ಸುಗ್ರೀವಾಜ್ಞೆಯನ್ನು ವಾಪಸ್ ಪಡೆದಿತ್ತು. ಬಳಿಕ ಮೀಸಲಾತಿ ಸುಗ್ರೀವಾಜ್ಞೆಯನ್ನು ವಾಪಸ್ ಪಡೆಯುವಂತೆ ಕೋರಿ ರಾಜ್ಯ ಸರಕಾರ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಕಳುಹಿಸಿಕೊಟ್ಟಿತ್ತು.
ಆದರೆ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು ಮೀಸಲಾತಿ ಶೇ.50 ಮೀರಬಾರದು ಎಂದು ಅಕ್ಟೋಬರ್ 4ರಂದು ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಹಿಂದಕ್ಕೆ ಪಡೆಯುವ ರಾಜ್ಯ ಸರಕಾರದ ಪ್ರಸ್ತಾಪವನ್ನು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಗುರುವಾರ ವಾಪಸ್ ಕಳುಹಿಸಿದ್ದರು.
ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ನಿಗದಿತ ಸಮಯದಲ್ಲಿ ನಡೆಸುವುದು ಅಥವಾ ಮುಂದೂಡುವುದು ರಾಜ್ಯಪಾಲರು ಕೈಗೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿದೆ.