'ಸರಕಾರಕ್ಕೆ ಪ್ರತಿನಿತ್ಯ ಕಿರಿಕಿರಿ ಉಂಟು ಮಾಡುವವರಿಗೆ ದೇವರು ಒಳ್ಳೆ ಬುದ್ಧಿ ಕೊಡಲಿ ಎಂದು ತಾಯಂದಿರು ದೇವರಲ್ಲಿ ಹರಕೆ ಹೊತ್ತುಕೊಳ್ಳಬೇಕು' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿನಂತಿಸಿಕೊಂಡಿದ್ದಾರೆ.
ಶುಕ್ರವಾರ ನಗರದಲ್ಲಿ ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಸೀರೆ, ಬಾಂಡ್‌ಗಳನ್ನು ವಿತರಿಸಿ ಮಾತನಾಡಿದ ಅವರು,ಯಾವುದೇ ಪ್ರಚಾರ ಗಿಟ್ಟಿಸಲು ಅಥವಾ ಗಿಮಿಕ್ ಮಾಡಲು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿಲ್ಲ. ಆದರೂ ಸರಕಾರದ ಪ್ರತಿಯೊಂದು ಕಾರ್ಯಕ್ಕೂ, ಅಭಿವೃದ್ಧಿ ಯೋಜನೆಗೆ ಪ್ರತಿನಿತ್ಯ ಅಡ್ಡಿ ಆತಂಕ ಉಂಟು ಮಾಡುತ್ತಿದ್ದಾರೆ. ಹಾಗಾಗಿಯೇ ತಾಯಂದಿರುವ ಪ್ರತಿದಿನ ದೇವರಿಗೆ ಕೈಮುಗಿಯುವ ಸಂದರ್ಭದಲ್ಲಿ, ಅಂತಹವರಿಗೆ ಒಳ್ಳೇ ಬುದ್ದಿ ಕೊಡು ಎಂದು ಬೇಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು.
ಅಲ್ಲದೇ ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಬಾಂಡ್ ನೀಡಲು ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಇನ್ನು ಪ್ರತಿಯೊಬ್ಬ ಫಲಾನುಭವಿಗಳಿಗೆ ಬಾಂಡ್‌ಗಳನ್ನು ರಿಜಿಸ್ಟರ್ಡ್ ಪೋಸ್ಟ್ ಮೂಲಕ ವಿತರಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಈ ಸಂದರ್ಭದಲ್ಲಿ ಘೋಷಿಸಿದರು.
ಪೋಷಕರು ಮಕ್ಕಳಿಗೆ ಕಡ್ಡಾಯವಾಗಿ ಎಸ್ಸೆಸ್ಸೆಲ್ಸಿವರೆಗೆ ಶಿಕ್ಷಣ ನೀಡಬೇಕು. ಇಲ್ಲವಾದಲ್ಲಿ ಭಾಗ್ಯಲಕ್ಷ್ಮಿ ಯೋಜನೆ ಹಣವನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂದು ಎಚ್ಚರಿಸಿದರು. ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗಬೇಡಿ. ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುವುದಿಲ್ಲ, ಶಿಕ್ಷಣ ಕೊಡಿಸುತ್ತೇವೆಂದು ಪ್ರಮಾಣ ಮಾಡಿ ಎಂದು ನೆರೆದಿದ್ದ ಭಾಗ್ಯಲಕ್ಷ್ಮಿ ಫಲಾನುಭವಿಗಳಿಂದ ಮುಖ್ಯಮಂತ್ರಿಗಳು ಪ್ರಮಾಣ ಮಾಡಿಸಿದರು.