ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಸೀರೆ ವಿತರಣೆ ಕಾರ್ಯಕ್ರಮಕ್ಕೆ ಟೆಂಡರ್ ಕರೆಯದೆ ಸಾರ್ವಜನಿಕರ ಹಣ ಪೋಲು ಮಾಡಿದ್ದಾರೆ ಎಂದು ಆರೋಪಿಸಿರುವ ಜೆಡಿಎಲ್‌ಪಿ ನಾಯಕ ಎಚ್.ಡಿ.ರೇವಣ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ಜಿಲ್ಲಾ ಅಧಿಕಾರಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಿ.ಪಂ ಅಧ್ಯಕ್ಷೆ ಮಹಾದೇವಮ್ಮ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜಿ.ಪಂ.ಸಾಮಾನ್ಯ ಸಭೆಯಲ್ಲಿ ರೇವಣ್ಣ ಮಾತನಾಡಿ, ಅಧಿಕಾರಿ ವಿರುದ್ಧ ಸಿಇಒ, ಪೊಲೀಸರಿಗೆ ದೂರು ನೀಡಬೇಕು. ಇಲ್ಲವಾದರೆ, ಅಧ್ಯಕ್ಷರಿಂದ ದೂರು ಕೊಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಆದರೆ ಈ ಬಗ್ಗೆ ಯಾವುದೇ ನಿರ್ಣಯ ಅಂಗೀಕರಿಸದೆ ಸಭೆ ಮುಕ್ತಾಯವಾಯಿತು.
ಮುಖ್ಯಮಂತ್ರಿ ಕಾರ್ಯಕ್ರಮದ ನೆಪದಲ್ಲಿ 30 ಲಕ್ಷಕ್ಕೂ ಹೆಚ್ಚು ಹಣವನ್ನು ನಿಯಮ ಉಲ್ಲಂಘಿಸಿ ಅಧಿಕಾರಿಗಳು ಪೋಲು ಮಾಡಿದ್ದಾರೆ ಎಂದು ಕಿಡಿಕಾರಿದರು. ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅವರಿಗೆ ದೂರವಾಣಿ ಕರೆ ಮಾಡಿ, ಜಿಲ್ಲಾ ಲೋಕಾಯುಕ್ತ ನಿದ್ರಿಸುತ್ತಿದೆಯೇ ಎಂದು ಕೇಳ್ತೀನಿ. ತಾವು ಮಾತನಾಡಿದ್ದನ್ನೇ ದೂರು ಎಂದು ದಾಖಲಿಸಿ ಎಂದು ಒತ್ತಾಯಿಸುತ್ತೇನೆ ಎಂದರು.
ಸಿಎಂ ಕಾರ್ಯಕ್ರಮಕ್ಕಾಗಿ ಶಾಮಿಯಾನಕ್ಕೆ ಐದು ಲಕ್ಷ ರೂ.ನೀಡಲಾಗಿದೆ. ಎರಡು ಲಕ್ಷ ರೂ. ಮೀರಿದ ಯಾವುದೇ ಕಾಮಗಾರಿಗೆ ಟೆಂಡರ್ ಕರೆಯಬೇಕು ಎಂಬ ನಿಯಮವನ್ನು ಇಲ್ಲಿ ಉಲ್ಲಂಘಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿ ರಾಧಾಕೃಷ್ಣರನ್ನು ರೇವಣ್ಣ ತರಾಟೆಗೆ ತೆಗೆದುಕೊಂಡರು.