ಮುಂಬರುವ ದಿನದಲ್ಲಿ ಬ್ಯಾಂಕ್ ಮೂಲಕ ಮಾಸಾಶನ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ತಾಲೂಕಿನ ಬಸಾಪುರ ಗ್ರಾಮದ ಬಳಿ ಏರ್ಪಡಿಸಿದ್ದ ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸೀರೆ ಹಾಗೂ ಬಾಂಡ್ ವಿತರಣೆ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಸಂತ್ರಸ್ತರಿಗೆ ಆಸರೆ ಮನೆಗಳ ಹಕ್ಕುಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಂಚೆ ಇಲಾಖೆಯಲ್ಲಿ ಮಾಸಾಶನ ವಿತರಿಸಲು ಕೆಲವರು 50ರಿಂದ 60 ರೂ. ವಸೂಲಿ ಮಾಡುವರೆಂಬ ಆರೋಪ ಬಂದ ಹಿನ್ನೆಲೆಯಲ್ಲಿ ವೃದ್ದಾಪ್ಯ, ವಿಧವಾ ವೇತನ, ವಿಕಲಚೇತನರ ಮಾಸಾಶನವನ್ನು ಬ್ಯಾಂಕ್ ಮೂಲಕವೇ ವಿತರಿಸಲಾಗುವುದು. ರೈತ ಗೀತೆ 'ಉಳುವ ಯೋಗಿಯ ನೋಡಲ್ಲಿ ' ಹಾಡನ್ನು ಪ್ರತಿ ಶಾಲೆಯಲ್ಲೂ ಗೌರವಾರ್ಥವಾಗಿ ಹಾಡುವುದಕ್ಕೆ ಹಾಗೂ ವಿದ್ಯಾರ್ಥಿಗಳಿಗೆ ಕಂಠಪಾಠ ಮಾಡಿಸುವುದಕ್ಕೆ ಶೀಘ್ರದಲ್ಲಿಯೇ ಸುತ್ತೋಲೆ ಹೊರಡಿಸಲಾಗುವುದು ಎಂದರು.
ಇದು ಸರಕಾರಿ ಕಾರ್ಯಕ್ರಮವೇ ಹೊರತು, ರಾಜಕೀಯ ಕಾರ್ಯಕ್ರಮವಲ್ಲ. ಆದ್ದರಿಂದ ಜನಪ್ರತಿನಿಧಿಗಳಿಗೆಲ್ಲ ಆಹ್ವಾನಿಸಲಾಗಿದೆ. ಚುನಾವಣೆಯಲ್ಲಿ ಮಾತ್ರ ಭಿನ್ನಾಭಿಪ್ರಾಯಗಳಿರುತ್ತವೆ. ಮುಗಿದ ಮೇಲೆ ಆಡಳಿತ ಹಾಗೂ ಪ್ರತಿಪಕ್ಷಗಳು ತಮ್ಮ ಕೆಲಸ ಮಾಡಬೇಕಿದೆ. ಆದರೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೂ ನೆಮ್ಮದಿಯಿಂದ ಇರುವುದಕ್ಕೆ ಕೆಲವರು ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ಜನರಿಗೆ ಮೂಲ ಸೌಲಭ್ಯ ಒದಗಿಸುವವರೆಗೂ ನಿದ್ದೆ ಮಾಡುವುದಿಲ್ಲ. ನನಗೆ ಗೊತ್ತಿರುವುದು ಒಂದೇ ಜಾತಿ. ಸರ್ವರಿಗೂ ಸಮಪಾಲು ಒದಗಿಸುವುದು ಹಾಗೂ ಸರ್ವರಿಗೂ ಸಮಬಾಳು ಎಂಬ ತತ್ವದ ಮೇಲೆ ಆಡಳಿತ ನಡೆಸುತ್ತಿದ್ದೇನೆ ಎಂದರು.