ಆರೆಸ್ಸೆಸ್ ಉಗ್ರವಾದ; ರಾಹುಲ್ ಹೇಳಿಕೆ ಬೆಂಬಲಿಸಿದ 'ಪೂಜಾರಿ'
ಮಂಗಳೂರು, ಶನಿವಾರ, 13 ನವೆಂಬರ್ 2010( 13:49 IST )
ತತ್ವ, ಸಿದ್ದಾಂತದ ಮುಖವಾಡ ಹೊತ್ತುಕೊಂಡಿರುವ ಆರೆಸ್ಸೆಸ್ ಹಣ ಮತ್ತು ಅಧಿಕಾರದ ಹಿಂದೆ ಹೋಗುತ್ತಿದೆ. ಆರೆಸ್ಸೆಸ್ ತನ್ನ ಗೌರವ ಉಳಿಸಿಕೊಳ್ಳಬೇಕಾದರೆ ಸೋನಿಯಾ ಗಾಂಧಿ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ ಮಾಜಿ ಸರಸಂಘ ಮುಖ್ಯಸ್ಥ ಸುದರ್ಶನ್ ಅವರನ್ನು ಸಂಘಟನೆಯಿಂದ ಹೊರಹಾಕಬೇಕು ಎಂದು ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಆಗ್ರಹಿಸಿದರು.
ಸಂಘಟನೆಗೂ ಸುದರ್ಶನ್ ಅವರಿಗೂ ಸಂಬಂಧ ಇಲ್ಲ ಎನ್ನುವ ಮೂಲಕ ಆರೆಸ್ಸೆಸ್ ಜಾರಿಕೊಳ್ಳುತ್ತಿದೆ. ಆದರೆ, ಮಹಿಳೆಯರನ್ನು ಗೌರವದಿಂದ ಕಾಣುತ್ತೇವೆ ಎನ್ನುವ ಸಂಘಟನೆಗೆ ಇದು ಶೋಭೆ ತರದು. ಸೋನಿಯಾ ಗಾಂಧಿ ತಮ್ಮ ಅತ್ತೆ ಇಂದಿರಾಜಿ ಮತ್ತು ಪತಿಯನ್ನು ಕೊಲ್ಲಿಸಿದರು ಎಂಬ ಸುಳ್ಳು ಆರೋಪವನ್ನು ಸುದರ್ಶನ್ ಮಾಡಿದ್ದಾರೆ. ಸುದರ್ಶನ್ ಅವರ ತಂದೆಯನ್ನು ತಾಯಿಯೇ ಕೊಲೆ ಮಾಡಿದ್ದಾರೆ ಎಂದರೆ ಅವರಿಗೆ ನೋವಾಗುವುದಿಲ್ಲವೇ ಎಂದು ಪೂಜಾರಿ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಮಾಲೆಗಾಂವ್ ಸ್ಫೋಟದಲ್ಲಿ ಪ್ರಜ್ಞಾ ಸಿಂಗ್, ಅಜ್ಮೀರ್ ಸ್ಫೋಟದಲ್ಲಿ ಇಂದ್ರೇಶ್ ಕುಮಾರ್ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಸಂಘ ಪರಿವಾರದ ಇತ್ತೀಚಿನ ಬೆಳವಣಿಗೆ ನೋಡುವಾಗ ಯಾರೂ ಕೂಡಾ ಭಯೋತ್ಪಾದಕ ಸಂಘಟನೆಗೆ ಹೋಲಿಸಬಹುದು. ರಾಹುಲ್ ಗಾಂಧಿ ಕೂಡಾ ಅದನ್ನೇ ಹೇಳಿದ್ದಾರೆ ಎಂದು ಹೇಳುವ ಮೂಲಕ ಪೂಜಾರಿ ಸಮರ್ಥಿಸಿಕೊಂಡರು. ಸಂಘಟನೆ ಮೇಲೆ ಇಷ್ಟೆಲ್ಲಾ ಆರೋಪ ಇದ್ದರೂ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವುದು ಯಾವ ಪುರಷಾರ್ಥಕ್ಕೆ ಎಂದು ಅವರು ಪ್ರಶ್ನಿಸಿದರು.