ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಮೀಸಲಾತಿ ಕುರಿತಂತೆ ಹೊರಡಿಸಿದ್ದ ಸುಗ್ರೀವಾಜ್ಞೆ ಪ್ರಸ್ತಾಪವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಎರಡನೇ ಬಾರಿಯೂ ಅಂಕಿತ ಹಾಕದೆ ವಾಪಸ್ ಕಳುಹಿಸಿಸುವ ಮೂಲಕ ಮತ್ತೊಮ್ಮೆ ಆಡಳಿತರೂಢ ಬಿಜೆಪಿ ಸರಕಾರ ಮತ್ತು ರಾಜ್ಯಪಾಲರ ನಡುವೆ ಜಂಗೀಕುಸ್ತಿ ಆರಂಭವಾಗಿದೆ.
ಕಳೆದ ಅಕ್ಟೋಬರ್ 4ರಂದು ಹೊರಡಿಸಿದ್ದ ಮೀಸಲಾತಿ ಸುಗ್ರೀವಾಜ್ಞೆಗೆ ಪ್ರತಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, ಸರಕಾರ ತರಾತುರಿಯಲ್ಲಿ ಮೀಸಲಾತಿ ಸುಗ್ರೀವಾಜ್ಞೆಯನ್ನು ವಾಪಸ್ ಪಡೆದು ಅದನ್ನು ರಾಜ್ಯಪಾಲರಿಗೆ ಕಳುಹಿಸಿತ್ತು. ಆದರೆ ರಾಜ್ಯಪಾಲರು ಅದಕ್ಕೆ ಅಂಕಿತ ಹಾಕಲು ನಿರಾಕರಿಸಿ ವಾಪಸ್ ಮಾಡಿದ್ದರು.
ಆದರೂ ಪಟ್ಟು ಬಿಡದ ಸರಕಾರ ಶುಕ್ರವಾರ ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ತುರ್ತು ಸಚಿವ ಸಂಪುಟ ಸಭೆ ನಡೆಸಿ, ಎರಡನೇ ಬಾರಿ ಮೀಸಲಾತಿ ಸುಗ್ರೀವಾಜ್ಞೆ ಪ್ರಸ್ತಾಪವನ್ನು ವಾಪಸ್ ಕಳುಹಿಸಲು ನಿರ್ಧರಿಸಿತ್ತು. ಅದರಂತೆ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೆ ರವಾನಿಸಿತ್ತು.
ಆದರೆ ಎರಡನೇ ಬಾರಿಯೂ ಸರಕಾರಕ್ಕೆ ಚಾಟಿ ಏಟು ನೀಡಿರುವ ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್ ಪಡೆಯುವ ಪ್ರಸ್ತಾಪಕ್ಕೆ ಅಂಕಿತ ಹಾಕಲು ಸಾಧ್ಯವಿಲ್ಲ ಎಂದು ವಾಪಸ್ ಕಳುಹಿಸಿದ್ದಾರೆ.
ವಾಪಸ್ ಕಳುಹಿಸಲು ಕಾರಣವೇನು?: ಮೀಸಲಾತಿ ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಸರಕಾರ ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದಿಲ್ಲ. ಅಲ್ಲದೇ ಕಾನೂನು ಕಾರ್ಯದರ್ಶಿಯ ಸಲಹೆಯೂ ಕೇಳಿಲ್ಲ. ಅದೇ ರೀತಿ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸುವಂತಿಲ್ಲ. ಆ ನಿಟ್ಟಿನಲ್ಲಿ ಸರಕಾರ ಮನಬಂದಂತೆ ವರ್ತಿಸುವಂತಿಲ್ಲ. ಈ ಕಾರಣದಿಂದ ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿರುವುದಾಗಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸ್ಪಷ್ಟನೆ ನೀಡಿದ್ದಾರೆ.