ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರನ್ನು ಗದಗ ಜಿಲ್ಲೆ ಉಸ್ತುವಾರಿ ಸ್ಥಾನದಿಂದ ತೆಗೆದು ರಾಯಚೂರು ಜಿಲ್ಲೆ ಹೊಣೆಗಾರಿಕೆ ನೀಡಿರುವ ಬಗ್ಗೆ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗದಗ ಉಸ್ತುವಾರಿ ಹೊತ್ತ ಶ್ರೀರಾಮುಲು ರಾಜ್ಯ ನಾಯಕರಾಗಿ ಬೆಳೆದಿದ್ದರು. ಅಪಾರ ಜನಬೆಂಬಲ ಗಳಿಸಿದ್ದರು. ಆದರೂ ಅವರನ್ನು ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಯಾಕೆ ಬದಲಾಯಿಸಲಾಯಿತು ಎಂಬುದಕ್ಕೆ ಸ್ವತಃ ಮುಖ್ಯಮಂತ್ರಿಗಳೇ ಉತ್ತರಿಸಬೇಕು ಎಂದು ಪರೋಕ್ಷವಾಗಿ ಅತೃಪ್ತಿ ಹೊರಹಾಕಿದರು.
ಶನಿವಾರ ಬಳ್ಳಾರಿ ತಾಲೂಕು ಹಡ್ಲಿಗಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಹುದ್ದೆ ಬಳ್ಳಾರಿಗೆ ಒಲಿಯಲಿದೆಯೇ ಎಂಬ ಪ್ರಶ್ನೆಗೆ, ನಮಗೆ ಯಾವುದೇ ಹುದ್ದೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇವೆ ಎಂದರು.
ಅಲ್ಲದೇ ಸರಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಹಿರಿಯ ನಾಯಕರೇ ಚಿಂತನೆ ನಡೆಸುತ್ತಾರೆ. ಪಕ್ಷದ ವೇದಿಕೆಯಲ್ಲಿ ಮಾತನಾಡುತ್ತಾರೆ. ಆ ಬಗ್ಗೆ ನಾನೇನೂ ಪ್ರತಿಕ್ರಿಯಿಸುವುದಿಲ್ಲ. ಇದು ವರಿಷ್ಠರಿಗೆ ಬಿಟ್ಟ ವಿಷಯ ಎಂದು ಈ ಸಂದರ್ಭದಲ್ಲಿ ಹೇಳಿದರು.