ಬೆಂಗಳೂರು ಮತ್ತು ಮಂಗಳೂರು ಮಧ್ಯೆ ಪ್ರತಿನಿತ್ಯ ಹಗಲು ವೇಳೆ ರೈಲು ಸೌಲಭ್ಯ ಕಲ್ಪಿಸಲು ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ರೈಲ್ವೆಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ವಾರಕ್ಕೆ ಮೂರು ದಿನ ಮಾತ್ರ ಸಂಚರಿಸುತ್ತಿರುವ ಈ ರೈಲಿನ ಸೌಲಭ್ಯವನ್ನು ವಿಸ್ತರಿಸಲು ಸಾರ್ವಜನಿಕರ ಒತ್ತಡವೂ ಇದೆ ಎಂದು ಹೇಳಿದರು.
ಶಿವಮೊಗ್ಗ-ಮೈಸೂರು ನಡುವೆ ಇಂಟರ್‌ಸಿಟಿ ರೈಲು ಸೌಲಭ್ಯವನ್ನು ಆದಷ್ಟು ಬೇಗ ಪ್ರಾರಂಭಿಸಲಾಗುವುದು. ಫೆಬ್ರುವರಿಗೆ ಮುನ್ನ ಈ ಎಲ್ಲ ರೈಲುಗಳು ಪ್ರಾರಂಭವಾಗಲಿವೆ ಎಂದರು.
ಹಾಸನ - ಶ್ರವಣಬೆಳಗೊಳ ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಯೋಜನೆಗೆ ಭೂಸ್ವಾಧೀನ ಸಮಸ್ಯೆ ಎದುರಾಗಿದೆ. ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿದ್ದು, ಶೀಘ್ರ ಭೂಮಿ ಹಸ್ತಾಂತರಿಸುವಂತೆ ಸೂಚನೆ ನೀಡಲಾಗಿದೆ. ರಾಜ್ಯ ಸರಕಾರ ಸಹಕರಿಸಿದರೆ, ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಲು ಸಾಧ್ಯ. ಹಾಸನದಿಂದ ಶ್ರವಣಬೆಳಗೊಳವರೆಗೆ ಮತ್ತು ಬೆಂಗಳೂರಿನಿಂದ ನೆಲಮಂಗಲ ತನಕವೂ ಕಾಮಗಾರಿ ಮುಗಿದಿದೆ. ನೆಲಮಂಗಲ- ಶ್ರವಣಬೆಳಗೊಳ ಮಧ್ಯೆ ಮಾತ್ರ ಕೆಲಸ ಬಾಕಿಯಿದೆ ಎಂದು ವಿವರಿಸಿದರು.