ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ವಿ.ಸೋಮಣ್ಣ ಅವರನ್ನೇ ಮರು ನೇಮಕ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು, ಶನಿವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಯೇ ಪ್ರತಿಭಟನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಜವಾಬ್ದಾರಿಯಿಂದ ಸೋಮಣ್ಣ ಅವರನ್ನು ಬದಲಾವಣೆ ಮಾಡಿರುವುದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, 'ನಮಗೆ ಸೋಮಣ್ಣ ಬೇಕೇ ಬೇಕು' ಎಂದು ಘೋಷಣೆ ಕೂಗಿದರು. ಪಕ್ಷದ ಹಿರಿಯ ಮುಖಂಡ ಬಿ.ಬಿ.ಶಿವಪ್ಪ, ಕೆ.ಎಚ್.ಹನುಮೇಗೌಡ ಅವರಿಗೆ 'ನೀವು ಸಿಎಂ ಮನವೊಲಿಸಿ, ಹಾಸನಕ್ಕೆ ಸೋಮಣ್ಣ ಅವರನ್ನು ಕರೆ ತರಲೇಬೇಕು' ಎಂದು ಪಟ್ಟು ಹಿಡಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದರೂ, ಜೆಡಿಎಸ್ ಪ್ರಾಬಲ್ಯ ಹೊಂದಿದ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲು ಸಾಧ್ಯ ಆಗಿರಲಿಲ್ಲ. ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡ ಕೇವಲ 15 ದಿನದಲ್ಲಿ ಇಡೀ ಜಿಲ್ಲಾಡಳಿತವನ್ನು ಕೈಗೆತ್ತಿಕೊಂಡಿದ್ದು ಅಷ್ಟೇ ಅಲ್ಲ, ಪಕ್ಷದ ಕಾರ್ಯಕರ್ತರಿಗೆ ಮನ್ನಣೆ ಸಿಗುವಂತೆ ಮಾಡಿದ್ದರು. ಇದೇ ರೀತಿಯಾದರೆ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮಾಡುವುದು ಕಷ್ಟ ಎನ್ನುವುದು ಕಾರ್ಯಕರ್ತರ ಅಭಿಪ್ರಾಯ.