ಹೊಸ ಮೀಸಲು ನಿಗದಿಪಡಿಸುವ ಸುಗ್ರೀವಾಜ್ಞೆ ಪ್ರಸ್ತಾವನೆಯನ್ನು ರಾಜ್ಯಪಾಲರು ಎರಡನೇ ಬಾರಿಯೂ ತಿರಸ್ಕರಿಸಿರುವುದರಿಂದ ಹಳೇ ಮೀಸಲು ಪ್ರಕಾರವೇ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
'ರಾಜ್ಯಪಾಲರ ಕ್ರಮದಿಂದಾಗಿ ಚುನಾವಣೆ ನಡೆಸುವುದನ್ನು ಬಿಟ್ಟು ನಮ್ಮೆದುರು ಬೇರಾವ ಮಾರ್ಗಗಳು ಕಾಣುತ್ತಿಲ್ಲ' ಎಂದು ಶನಿವಾರ ಹರಿಹರ ಗ್ರಾಸೀಂ ಕಾರ್ಖಾನೆ ಆವರಣದ ಹೆಲಿಪ್ಯಾಡಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಈ ಸಂಬಂಧ ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಉದ್ದೇಶ ಹೊಂದಿಲ್ಲ. ಡಿಸೆಂಬರ್ ಒಳಗಾಗಿ ಚುನಾವಣೆ ನಡೆಸಿ ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಮೀಸಲು ಪಟ್ಟಿಯಲ್ಲಿ ಹಿಂದುಳಿದವರಿಗೆ ಅನ್ಯಾಯ ಆಗಿದೆ ಎಂದು ಮನಗಂಡು ಸುಧಾರಣೆ ಬಯಸಿ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೆ ಕಳುಹಿಸಿದ್ದೇವು. ಈ ಸಂಬಂಧ ರಾಜ್ಯಪಾಲರ ಜತೆ ಸಮಾಲೋಚಿಸುವಂತೆ ಪ್ರತಿಪಕ್ಷ ನಾಯಕರನ್ನೂ ಕೋರಿದ್ದೆವು ಎಂದು ಮುಖ್ಯಮಂತ್ರಿ ತಿಳಿಸಿದರು.
ಸಂಸದ ಹಾಗೂ ಪುತ್ರ ರಾಘವೇಂದ್ರ ಭೂ ಹಗರಣದಲ್ಲಿ ಭಾಗಿ ಆಗಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿ ಸತ್ಯಾಂಶ ಇಲ್ಲ ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು.