ಭೂ ಸ್ವಾಧೀನದ ವಿಚಾರದಲ್ಲಿ ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ರಾಜಕೀಯ ಜೀವನದಿಂದ ನಿವೃತ್ತಿ ಹೊಂದುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಧಿಕಾರದಲ್ಲಿದ್ದಾಗ ನನ್ನ ಹೆಂಡತಿ, ಮಕ್ಕಳು, ಕುಟುಂಬದ ಸಹೋದರರಿಗೆ ಅನುಕೂಲವಾಗುವ ರೀತಿಯಲ್ಲಿ ಯಾವುದೇ ಡಿನೋಟಿಫೈ ಮಾಡಿಲ್ಲ. ಒಂದು ವೇಳೆ ಇದನ್ನು ಯಾರಾದರೂ ಸಾಬೀತು ಮಾಡಿದರೆ ನಾನು ರಾಜಕೀಯ ಬದುಕಿಗೆ ಗುಡ್ ಬೈ ಹೇಳುತ್ತೇನೆ.
ಈ ಪಂಥಾಹ್ವಾನವನ್ನು ಸ್ವೀಕರಿಸಲು ಯಡಿಯೂರಪ್ಪನವರು ಸಿದ್ದರಿದ್ದಾರೆಯೇ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳ ಪಟಾಲಂ ಸೇರಿಕೊಂಡು ಏನೇನು ಅವ್ಯವಹಾರ, ಕರ್ಮಕಾಂಡ ನಡೆಸಿದ್ದಾರೆ ಎಂಬುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ. ಬಡವರು 30-40 ವರ್ಷಗಳಿಂದ ವಾಸ ಮಾಡುತ್ತಿದ್ದ ಪ್ರದೇಶವನ್ನು ಬುಲ್ಡೋಜ್ ಮಾಡಿ ಆ ನಿವೇಶನವನ್ನು ಸಂಸದ ಡಿ.ಬಿ.ಚಂದ್ರೇಗೌಡ ಅವರ ಮಗಳಿಗೆ ಕೊಡಲಾಗಿದೆ ಎಂದು ಆರೋಪಿಸಿದರು.
ನಾನು ಮುಖ್ಯಮಂತ್ರಿ ವಿರುದ್ಧ ಡಿ ನೋಟಿಫಿಕೇಷನ್ ಸಂಬಂಧ ಆರೋಪ ಮಾಡಿದಾಗ ರಾಜಕೀಯ ಪ್ರೇರಿತ ಎಂದು ಹೇಳಿದ ಡಿ.ಬಿ.ಚಂದ್ರೇಗೌಡ ಹಾಗೂ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಪುಟ್ಟಸ್ವಾಮಿ ಅವರು ವಸ್ತುಸ್ಥಿತಿಯನನು ಅರ್ಥ ಮಾಡಿಕೊಂಡು ಮಾತನಾಡಲಿ. ಮುಖ್ಯಮಂತ್ರಿಯವರು ಇನ್ನಾದರೂ ವಿರೋಧ ಪಕ್ಷಗಳ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಟ್ಟು ಗಂಭೀರವಾಗಿ ವರ್ತನೆ ಮಾಡಲಿ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದಾಗ 350 ನಿವೇಶನಗಳನ್ನು ಕೊಟ್ಟಿದ್ದೇನೆ ಎಂದು ಆರೋಪ ಮಾಡಲಾಗಿದೆ. ಆದರೆ, ವಿವೇಚನಾ ಕೋಟಾದಲ್ಲಿ ನನ್ನ ಹೆಂಡತಿ, ಮಕ್ಕಳು, ಕುಟುಂಬ, ಸಹೋದರರಿಗೆ ಕೊಟ್ಟಿಲ್ಲ. ನಾನು ಸದಾನಂದ ಗೌಡರಿಗೆ ನಿವೇಶನ ಕೊಟ್ಟಿದ್ದೇನೆ. ಅವರು ಅರ್ಹರಲ್ಲವೇ? ಬಿಜೆಪಿ ಶಾಸಕರಿಗೆ ಕೊಟ್ಟಿದ್ದೇನೆ ಎಂದು ಕುಮಾರಸ್ವಾಮಿ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.