ಆಡಳಿತಾರೂಢ ಬಿಜೆಪಿ ಸರಕಾರದ ಭ್ರಷ್ಟಾಚಾರವನ್ನು ವಿಪಕ್ಷಗಳು ಹೊರಗೆಯುತ್ತಿರುವ ಹಿನ್ನೆಲೆಯಲ್ಲಿ, ಬಿಜೆಪಿಯಲ್ಲಿ ಯಾರೂ ಗಂಡಸರಿಲ್ಲವೇ ? ಮೀಸೆ ಇದ್ದವರು ಯಾರೂ ಇಲ್ಲವೇ ? ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಬಿಜೆಪಿ ವರಿಷ್ಠರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಮಕ್ಕಳು, ಅಳಿಯನಿಂದ ಲೂಟಿ ನಡೆಯುತ್ತಿದ್ದರೂ ಬಿಜೆಪಿ ರಾಷ್ಟ್ರೀಯ ಮುಖಂಡರು ಕಣ್ಮುಚ್ಚಿ ಕುಳಿತಿದ್ದಾರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ತತ್ವ, ಸಿದ್ದಾಂತ ಹೊಂದಿರುವ ಪಕ್ಷ ಎಂದು ಬೊಬ್ಬೆ ಹೊಡೆಯುತ್ತಿರುವ ರಾಷ್ಟ್ರೀಯ ಮುಖಂಡರಿಗೆ, ರಾಜ್ಯದಲ್ಲಿನ ಭ್ರಷ್ಟಾಚಾರದ ಕರ್ಮಕಾಂಡ ತಿಳಿದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ಬಿಜೆಪಿಗೆ ಭ್ರಷ್ಟಾಚಾರದ ಕ್ಯಾನ್ಸರ್ ತಗುಲಿದ್ದು ಅದು ಕೋಮಾದಲ್ಲಿದೆ. ಅದನ್ನು ತುರ್ತು ನಿಗಾ ಘಟಕದಲ್ಲಿ ಇಟ್ಟಿದ್ದಾರೆ. ಅದಕ್ಕೆ ಯಾರೂ ಔಷಧ ಕೊಡುವವರೇ ಇಲ್ಲ ಎಂದು ಟೀಕಿಸಿದರು.