ಈಗೇಕೆ ಗವರ್ನರ್ ಭೇಟಿ ಮಾಡ್ತಿಲ್ಲ; ಪ್ರತಿಪಕ್ಷಕ್ಕೆ ಈಶ್ವರಪ್ಪ
ಬೆಂಗಳೂರು, ಸೋಮವಾರ, 15 ನವೆಂಬರ್ 2010( 11:07 IST )
ಹಿಂದುಳಿದ ವರ್ಗಗಳ ಬಗ್ಗೆ ಪ್ರತಿಪಕ್ಷದ ನಾಯಕರಿಗೆ ನಿಜವಾದ ಕಾಳಜಿ, ಕಳಕಳಿ ಇದ್ದಲ್ಲಿ ರಾಜ್ಯಪಾಲರ ಮನವೊಲಿಸಿ ಮೀಸಲಾತಿ ಸುಗ್ರೀವಾಜ್ಞೆಗೆ ಸಹಿ ಹಾಕಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರವನ್ನು ಅಭದ್ರಗೊಳಿಸಲು ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಹಲವಾರು ಬಾರಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಸಲಹೆ, ಸೂಚನೆಗಳನ್ನು ಕೊಟ್ಟಿದ್ದಾರೆ. ಆದರೆ, ಈ ವಿಚಾರದಲ್ಲಿ ಅವರು ಯಾಕೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವೊಲಿಕೆ ಮಾಡಿಕೊಡಬಾರದು ಎಂದು ಪ್ರಶ್ನೆ ಮಾಡಿದ್ದಾರೆ.
ಹಿಂದುಳಿದ ವರ್ಗಕ್ಕೆ ನ್ಯಾಯ ಕೊಡಬೇಕು ಎಂಬ ಕಾರಣಕ್ಕಾಗಿ ನಾವು ಸುಗ್ರೀವಾಜ್ಞೆ ಪ್ರಸ್ತಾಪವನ್ನು ಕಳುಹಿಸಿದ್ದರು ರಾಜ್ಯಪಾಲರು ಅದನ್ನು ವಾಪಸ್ ಕಳುಹಿಸುವ ಮೂಲಕ ಹಿಂದುಳಿದ ವರ್ಗಗಳ ವಿರೋಧಿ ನೀತಿ ತಾಳುತ್ತಿದ್ದಾರೆ. ಪ್ರತಿಪಕ್ಷಗಳಿಗೆ ವಿಶೇಷವಾಗಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗಗಳ ಬಗ್ಗೆ ನಿಜವಾದ ಕಾಳಜಿ ಇದ್ದಲ್ಲಿ, ಅವರಿಗೆ ನ್ಯಾಯ ಕೊಡಬೇಕು ಎಂಬ ಬದ್ಧತೆ, ಪ್ರಾಮಾಣಿಕತೆ ಇದ್ದಲ್ಲಿ ಕೂಡಲೇ ರಾಜ್ಯಪಾಲರ ಬಳಿ ತೆರಳಿ ಅವರ ಮನವೊಲಿಸುವ ಪ್ರಯತ್ನ ಮಾಡಲಿ ಎಂದರು.
ಈ ಸುಗ್ರೀವಾಜ್ಞೆಗೆ ಸಂಬಂಧಪಟ್ಟಂತೆ ಪ್ರತಿಪಕ್ಷಗಳ ಮುಖಂಡರು ಯಾವುದೇ ಸಲಹೆ, ಸೂಚನೆ ಕೊಟ್ಟರು ಅದನ್ನು ಸ್ವೀಕಾರ ಮಾಡಲು ಸರಕಾರ ಸಿದ್ದವಿದೆ. ಆದರೆ, ನಾವಾಗಿಯೇ ಪ್ರತಿಪಕ್ಷಗಳ ಮುಖಂಡರ ಮನೆ ಬಾಗಿಲಿಗೆ ಹೋಗುವುದಿಲ್ಲ ಎಂದರು. ಯಾವುದೇ ಕಾರಣಕ್ಕೂ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಗಳನ್ನು ಮುಂದೂಡುವುದಿಲ್ಲ. ನಿಗದಿಯಂತೆ ಚುನಾವಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.