ಉಸ್ತುವಾರಿ ಸ್ಥಾನ ಬದಲಿಸಿರುವುದು ನೋವು ತಂದಿದೆ: ಶ್ರೀರಾಮುಲು
ಗದಗ, ಸೋಮವಾರ, 15 ನವೆಂಬರ್ 2010( 12:20 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ದಿಢೀರನೆ ಕೈಬಿಟ್ಟಿರುವುದು ನೋವು ತಂದಿದೆ. ಬದಲಾವಣೆಗೆ ಮುನ್ನ ಅವರು ತಮ್ಮನ್ನು ಒಂದು ಮಾತು ಕೇಳಬಹುದಿತ್ತು ಎಂದು ಸಚಿವ ಬಿ. ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಸೇರಿದಂತೆ ನಾನಾ ಕಡೆಗಳಲ್ಲಿ ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಸೀರೆ ವಿತರಣಾ ಕಾರ್ಯಕ್ರಮಗಳಲ್ಲಿ ತಾವು ಮುಖ್ಯಮಂತ್ರಿ ಜತೆ ಪಾಲ್ಗೊಂಡಿದ್ದಾಗ ಅವರು ರಾಯಚೂರು ಜಿಲ್ಲಾ ಉಸ್ತುವಾರಿ ನೀಡುತ್ತಿರುವ ಬಗ್ಗೆ ತಮಗೆ ಹೇಳಬಹುದಿತ್ತು ಎಂದರು.
ಗದಗ ಜಿಲ್ಲೆ ಜನರೊಂದಿಗೆ ಮಾನಸಿಕವಾಗಿ ಬೆರೆಯುವ ಮೂಲಕ ರಾಜ್ಯ ಮಟ್ಟದ ನಾಯಕರೆನಿಸಿಕೊಂಡ ತಾವು ಆ ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡು ಬಂದಿರುವುದಾಗಿ ತಿಳಿಸಿದರು.
'ಗದಗ ಹಾಗೂ ಬಳ್ಳಾರಿ ಜಿಲ್ಲೆಗಳು ನನ್ನ ಎರಡು ಕಣ್ಣುಗಳಿದ್ದಂತೆ. ಗದಗ ಜಿಲ್ಲೆಯ ಉಸ್ತುವಾರಿ ಸಚಿವರಾಗಿರದಿದ್ದರೂ ಆ ಜಿಲ್ಲೆಯೊಂದಿಗಿನ ನಂಟು ಕಳೆದುಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲು ಮಾಡುವುದು ಮುಖ್ಯಮಂತ್ರಿಯವರ ಪರಮಾಧಿಕಾರ. ಈ ಪರಮಾಧಿಕಾರದ ಬಗ್ಗೆ ತಾವು ಪ್ರಶ್ನಿಸುವುದಿಲ್ಲ. ರಾಜಕೀಯದಲ್ಲಿ ಬದಲಾವಣೆ ಸಹಜ. ಅದೇ ರೀತಿ ಮುಖ್ಯಮಂತ್ರಿಯವರು ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲು ಮಾಡಿದ್ದಾರೆ. ಮುಖ್ಯಮಂತ್ರಿಗಳ ಇಚ್ಛೆಗೆ ಅನುಗುಣವಾಗಿ ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸುವುದಾಗಿ ತಿಳಿಸಿದರು.