ಗ್ರಂಥಾಲಯಗಳಿಗೆ ಹಂತ ಹಂತವಾಗಿ ಸ್ವಂತ ಕಟ್ಟಡಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಂಥಾಲಯ ಸಚಿವ ರೇವೂ ನಾಯಕ ಬೆಳಮಗಿ ತಿಳಿಸಿದ್ದಾರೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದ ನಾನಾ ಕಡೆ ಖಾಸಗಿ ಕಟ್ಟಡಗಳಲ್ಲೇ ಗ್ರಂಥಾಲಯಗಳು ನಡೆಯುತ್ತಿವೆ. ಇದು ಇಲಾಖೆ ಗಮನದಲ್ಲಿದ್ದು, ಸ್ವಂತ ಕಟ್ಟಡಗಳನ್ನು ಒದಗಿಸಲು ಕ್ರಮ ಕೈಗೊಂಡಿದೆ. ಹಂತ ಹಂತವಾಗಿ ಸ್ವಂತ ಕಟ್ಟಡಗಳು ಗ್ರಂಥಾಲಯಕ್ಕೆ ಬರಲಿವೆ ಎಂದು ಹೇಳಿದರು.
ಸಿಬ್ಬಂದಿಯ ವೇತನದ ತಾರತಮ್ಯಕ್ಕೆ ಸಂಬಂಧಿಸಿ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಈಗಾಗಲೇ ಸರಕಾರದ ಮಟ್ಟದಲ್ಲೂ ಮಾತುಕತೆ ನಡೆಸುತ್ತಿದ್ದು, ವೇತನ ತಾರತಮ್ಯ ನಿವಾರಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ನುಡಿದರು.
ಸಪ್ತಾಹ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಹಾಗೂ ವೈದ್ಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್, ದೃಶ್ಯ ಮಾಧ್ಯಮಗಳ ಫಲವಾಗಿ ಓದುವ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವುದು ಆತಂಕಕಾರಿ ಸಂಗತಿ. ಈ ನಿಟ್ಟಿನಲ್ಲಿ ಓದುವಂಥ ದಿನವನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ಓದುವ ಮನೋಭಾವ ವೃದ್ದಿಸುವ ನಿಟ್ಟಿನಲ್ಲಿ ಗುಜರಾತ್ ರಾಜ್ಯದಲ್ಲಿ ಪ್ರತಿ ಗ್ರಾಮಪಂಚಾಯಿತಿಯಲ್ಲಿ ನಿತ್ಯ ಬೆಳಗ್ಗೆ 10ರಿಂದ 11ರವರೆಗೆ ಓದುವ ಸಮಯ ಎಂದು ನಿಗದಿಪಡಿಸಲಾಗಿದೆ. ಇದೇ ಮಾದರಿಯನ್ನು ರಾಜ್ಯದಲ್ಲೂ ಅನುಷ್ಠಾನಕ್ಕೆ ತರಬಹುದು ಎಂದರು.