ಶಕ್ತಿ ಮೀರಿ ರಾಜ್ಯ ಸುಧಾರಣೆಗೆ ಯತ್ನಿಸುತ್ತೇನೆ: ಯಡಿಯೂರಪ್ಪ
ಚಿಕ್ಕಮಗಳೂರು, ಸೋಮವಾರ, 15 ನವೆಂಬರ್ 2010( 18:26 IST )
ಎರಡೂವರೆ ವರ್ಷದ ಅಧಿಕಾರದಲ್ಲಿ ಶಕ್ತಿ ಮೀರಿ ರಾಜ್ಯದಲ್ಲಿ ಸುಧಾರಣೆ ತರಲು ಪ್ರಯತ್ನಿಸಿದ್ದೇನೆ. ತಾಯಂದಿರಾದ ನೀವೆಲ್ಲ 5 ವರ್ಷಕ್ಕೆ ಬಹುಮತ ಕೊಟ್ಟಿದ್ದೀರಿ. ಆಡಳಿತಾವಧಿಯನ್ನು ಪೂರ್ಣಗೊಳಿಸುತ್ತೇನೆ. ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ಗುಡುಗಿದರು.
ಇಲ್ಲಿನ ನೇತಾಜಿ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿಗಳ ಆರೋಗ್ಯ ತಪಾಸಣೆ, ಬಾಂಡ್ ಮತ್ತು ಸೀರೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಆವೇಶದಿಂದ ಮಾತನಾಡಿ, ಇಷ್ಟು ವರ್ಷ ವೋಟು ಪಡೆದು ಆಡಳಿತ ನಡೆಸಿದವರು ಅಭಿವೃದ್ದಿಗೆ ಗಮನ ಕೊಡಲಿಲ್ಲ. ನನ್ನ ನೆರವು ಪಡೆದು ಮುಖ್ಯ ಮಂತ್ರಿಯಾದವರು ನನಗೆ ಮೋಸ ಮಾಡಿದರು ಎಂದು ಜೆಡಿಎಸ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.
ಈಗ ಎಲ್ಲರನ್ನು ಕಟ್ಟಿಕೊಂಡು ಕಷ್ಟಪಟ್ಟು ಸರಕಾರ ನಡೆಸುತ್ತಿದ್ದೇನೆ. ನಿಮಗೆಲ್ಲ ಗೊತ್ತಿದೆ. ವಿರೋಧಿಗಳು ಗೊಂದಲ ಸೃಷ್ಟಿಸಲು ಹೇಳಿಕೆ ನೀಡುತ್ತಿದ್ದಾರೆ. ಎರಡೂವರೆ ವರ್ಷ ಬೇರೆ ಬೇರೆ ಕಾರಣಗಳಿಂದಾಗಿ ಇಲ್ಲಿವರೆಗೆ ಸುಮ್ಮನಿದ್ದೆ. ಇನ್ನು ಮುಂದೆ ಯಾರಿಗೂ ಬಗ್ಗಲ್ಲ. ಉಳಿದಿರುವ ಎರಡೂವರೆ ವರ್ಷದಲ್ಲಿ ಸುಧಾರಣೆ ತಂದು ವಿರೋಧಿಗಳು ಯಡಿಯೂರಪ್ಪ ಬೇಕು ಎಂಬ ರೀತಿ ಆಡಳಿತ ನಡೆಸುವೆ ಎಂದು ವಿಪಕ್ಷಗಳಿಗೆ ಸವಾಲೆಸೆದರು.
ತಾಯಂದಿರೆ ನೀವೆಲ್ಲ ಅಭಿವೃದ್ದಿ ಕಾರ್ಯಕ್ಕೆ ಬೆಂಬಲಿಸಬೇಕು. ತಾ.ಪಂ.,ಜಿ.ಪಂನಲ್ಲಿ ನಮ್ಮನ್ನು ಬಲಪಡಿಸಬೇಕು. ಬದಲಾವಣೆ ಮಾಡಿಯೇ ತೋರಿಸುತ್ತೇನೆ. ನಿರಾಸೆಯಿಂದ ಈ ಮಾತನ್ನು ಹೇಳುತ್ತಿಲ್ಲ ಎಂದು ಚುನಾವಣೆ ಗಮನದಲ್ಲಿಟ್ಟುಕೊಂಡು ಹೇಳಿದರು.