ವಿವಿಧ ಉದ್ದೇಶಗಳಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಡಿನೋಟಿಫಿಕೇಷನ್ ಮಾಡುತ್ತಿರುವ ಕುರಿತಂತೆ ಒಂದೊಂದೇ ಹಗರಣಗಳು ಸರಕಾರದ ಕೊರಳು ಸುತ್ತುತ್ತಿದ್ದಂತೆ ಇತ್ತ ನಾಗರಬಾವಿಯಲ್ಲಿ 5.13 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದ ಆದೇಶವನ್ನು ಸರಕಾರ ಸದ್ದಿಲ್ಲದೆ ಹಿಂಪಡೆದಿದೆ.
ಅಷ್ಟೇ ಅಲ್ಲ ತಾನು ಮಾಡಿದ ತಪ್ಪಿಗೆ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಳ್ಳುವಂತಾಗಿದೆ. ಈ ಮೂಲಕ ಡಿನೋಟಿಫೈ ವಿವಾದದಿಂದಾಗಿ ಆಗಿರುವ ಮುಜುಗರದಿಂದ ತಪ್ಪಿಸಿಕೊಳ್ಳುವ ಪ್ರಯತ್ನಕ್ಕೆ ಸರಕಾರ ಮುಂದಾಗಿದೆ.
ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ನಾಗರಬಾವಿಯ 5.13 ಎಕರೆ ಡಿನೋಟಿಫೈ ಆದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ 2010ರ ಅ.19ರಂದೆ ರದ್ದುಗೊಳಿಸಿದ್ದರೂ ಇದು ಬೆಳಕಿಗೆ ಬಂದಿದ್ದು ಮಾತ್ರ ಸೋಮವಾರ. ಡಿನೋಟಿಫೈ ಆದೇಶವನ್ನು ಸರಕಾರ ರದ್ದುಗೊಳಿಸಿದೆ ಎಂದು ಸರಕಾರಿ ವಕೀಲರು ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು.
ಆದರೆ, ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಡಿನೋಟಿಫೈ ಮಾಡಬಹುದೇ ಮತ್ತು ಒಂದು ಬಾರಿ ಡಿನೋಟಿಫೈ ಮಾಡಿದರೆ ಅದನ್ನು ರದ್ದು ಮಾಡಬಹುದೇ ಎಂಬ ಅಂಶಗಳನ್ನು ಕಾನೂನಿನಡಿ ಪರಿಶೀಲನೆಗೆ ಒಳಪಡಿಸಲು ಹೈಕೋರ್ಟ್ ನಿರ್ಧರಿಸಿದೆ.
ನಾಗರಬಾವಿಯಲ್ಲಿ 200ನೇ ಇಸವಿಯಲ್ಲಿ ಮಂಜೂರು ಮಾಡಿದ್ದ 5.12 ಎಕರೆ ಪ್ರದೇಶವನ್ನು ಡಿನೋಟಿಫೈ ಮಾಡಿರುವ ಪ್ರಕರಣ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ತಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಡಲು ಮುಖ್ಯಮಂತ್ರಿಗಳು ಈ ಭೂಮಿಯನ್ನು ಡಿನೋಟಿಫೈ ಮಾಡಿದ್ದಾರೆ ಎಂಬ ಆರೋಪ ವಿಪಕ್ಷಗಳಿಂದ ಕೇಳಿಬಂದಿತ್ತು. ಅಲ್ಲದೇ ಡಿನೋಟಿಫೈ ವಿವಾದ ಹೈಕೋರ್ಟ್‌ನಲ್ಲೂ ಇದ್ದುದರಿಂದ ಮುಖ್ಯಮಂತ್ರಿಗಳು ಸದ್ದಿಲ್ಲದೆ ಡಿನೋಟಿಫೈ ಆದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.