'ರಾಜ್ಯದ ಭೂ ಹಗರಣ ಸಂಸತ್‌ನಲ್ಲೂ ಪ್ರತಿಧ್ವನಿಸಲು ಸಂಸದ ಅನಂತ್ ಕುಮಾರ್ ಅವರೇ ಕಾರಣ. ಅವರು ವಿಪಕ್ಷಗಳ ಜತೆ ಕೈಜೋಡಿಸಿ ಈ ರೀತಿ ಮಾಡಿದ್ದಾರೆ. ರಾಜ್ಯದ ನಾಯಕತ್ವ ಬದಲಾವಣೆಗೆ ಪಿತೂರಿ ನಡೆಸಿ ರಾಜಕೀಯ ದಾಳ ಉರುಳಿಸುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಹೈಕಮಾಂಡ್‌ಗೆ ಬರೆದಿರುವ ಪತ್ರದಲ್ಲಿ ದೂರಿದ್ದಾರೆ.
ದಿನಂಪ್ರತಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳಿಂದ ಬಿಜೆಪಿ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿದೆ. ಅಲ್ಲದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವರಿಷ್ಠರು ಕೂಡ ಗರಂ ಆಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಗೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆನ್ನಲಾಗಿದೆ.
ಈ ಎಲ್ಲಾ ಜಟಾಪಟಿ ನಡುವೆಯೇ ಮುಖ್ಯಮಂತ್ರಿಗಳು, ಈ ಎಲ್ಲಾ ಕುತಂತ್ರದ ಹಿಂದೆ ರಾಜ್ಯದ ಸಂಸದ ಅನಂತ್ ಕುಮಾರ್ ಅವರೇ ಕಾರಣ. ಎಲ್ಲಾ ಗೊಂದಲಗಳನ್ನು ಅವರೇ ಹುಟ್ಟುಹಾಕಿದ್ದಾರೆಂದು ವಿವರಿಸಿ, ಈವರೆಗೆ ನಡೆದ ಬೆಳವಣಿಗೆ ಕುರಿತು ಪತ್ರ ಬರೆದಿದ್ದಾರೆನ್ನಲಾಗಿದೆ. ದೆಹಲಿಯಲ್ಲಿ ಅಧ್ಯಕ್ಷ ನಿತಿನ್ ಗಡ್ಗರಿ, ಅರುಣ್ ಜೇಟ್ಲಿ ಅವರನ್ನು ಸಿಎಂ ಬೆಂಬಲಿಗರು ಭೇಟಿ ಮಾಡಿ, ಕೇಂದ್ರದ ವರಿಷ್ಠರು ಮಧ್ಯ ಪ್ರವೇಶಿಸಿ ಯಡಿಯೂರಪ್ಪ ವಿರುದ್ಧ ಅನಂತ್ ಕುಮಾರ್ ನಡೆಸುತ್ತಿರುವ ವಿರೋಧಿ ಚಟುವಟಿಕೆಗೆ ಕಡಿವಾಣ ಹಾಕುವಂತೆ ಕೋರಿದ್ದಾರೆ.
ಯಡಿಯೂರಪ್ಪ ಪದಚ್ಯುತಿಗೆ ಅನಂತ್ ಕುಮಾರ್ ಅವರು ಲೋಕಸಭೆಯಲ್ಲಿ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರಿಂದ ಬೆಂಬಲ ಪಡೆಯುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಗಾದಿಯಿಂದ ಇಳಿಸಿ, ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಪಟ್ಟಕ್ಕೆ ಏರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಕೇಂದ್ರ ನಾಯಕರಿಗೆ ಸಿಎಂ ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಅನಂತ್ ವಿರುದ್ಧ ನಾನೇಕೆ ಪತ್ರ ಬರೆಯಲಿ? ಭೂ ಹಗರಣದ ಸುಳಿಯಲ್ಲಿ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆಗೆ ಹೈಕಮಾಂಡ್‌ನಲ್ಲಿ ಬಿಸಿ, ಬಿಸಿ ಚರ್ಚೆ ನಡೆಯುತ್ತಿದ್ದು, ತಾವು ಹೈಕಮಾಂಡ್‌ಗೆ ಪತ್ರ ರವಾನಿಸಿದ್ದೀರಲ್ಲ ಹೌದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ನಾನು ಮತ್ತು ಅನಂತ್ ಕುಮಾರ್ ರಾಜ್ಯದಲ್ಲಿ ಪಕ್ಷ ಕಟ್ಟಿದವರು. ನಾನು ಅವರ ವಿರುದ್ಧ ಪತ್ರ ಯಾಕೆ ಬರೆಯಲಿ ಎಂದು ಪ್ರಶ್ನಿಸಿದ್ದಾರೆ.
ನಾಯಕತ್ವ ಬದಲಾವಣೆ ಇಲ್ಲ, ನನ್ನ ವಿರುದ್ಧ ಯಾವುದೇ ಸಹಿ ಸಂಗ್ರಹ ನಡೆದಿಲ್ಲ. ಎಲ್ಲವೂ ಕಪೋಲ ಕಲ್ಪಿತ ಸುದ್ದಿಗಳು ಎಂದು ಸಮಜಾಯಿಷಿ ನೀಡಿ ತಿಪ್ಪೆ ಸಾರಿದ್ದಾರೆ.
ಆದರೆ ಭೂ ಹಗರಣದ ಕುರಿತು ಬಿಜೆಪಿ ಹೈಕಮಾಂಡ್ ರಾಜ್ಯಕ್ಕೆ ವೀಕ್ಷಕರನ್ನು ಕಳುಹಿಸಿ ಎಲ್ಲಾ ಮಾಹಿತಿಯನ್ನು ಕಲೆ ಹಾಕಿ ಪರಿಶೀಲಿಸುವ ಕಾರ್ಯಕ್ಕೆ ಮುಂದಾಗಿದೆ. ಈಗಾಗಲೇ ಸುಮಾರು 61 ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವ ಬದಲಾವಣೆಗೆ ಸಹಿ ಹಾಕಿದ ಪತ್ರವನ್ನು ಹೈಕಮಾಂಡ್‌ಗೆ ಕಳುಹಿಸಲಾಗಿದೆ. ತೆರೆಮರೆಯಲ್ಲಿ ಬಿಜೆಪಿಯಲ್ಲಿ ಸಾಕಷ್ಟು ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಇದರಿಂದಾಗಿಯೇ ಯಡಿಯೂರಪ್ಪ ಹೈಕಮಾಂಡ್‌ಗೆ ಪತ್ರ ಬರೆದಿರುವುದು ಸತ್ಯ ಎಂದು ಮೂಲವೊಂದು ತಿಳಿಸಿದೆ.