ಆಡಳಿತಾರೂಢ ಬಿಜೆಪಿ ಸರಕಾರ ಕೇವಲ ಭೂ ಹಗರಣದಲ್ಲಿ ಮಾತ್ರ ಭಾಗಿಯಾಗಿಲ್ಲ, ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಫಲಾನುಭವಿಗಳಿಗೆ ವಿತರಿಸುತ್ತಿರುವ ಸೀರೆಯಲ್ಲೂ ಭಾರೀ ಅವ್ಯವಹಾರ ನಡೆದಿರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ.
ಸೂರತ್ ಜವಳಿ ಮಾರುಕಟ್ಟೆಯಲ್ಲಿ 115ರಿಂದ 120 ರೂಪಾಯಿ ದರಕ್ಕೆ ಸೀರೆಗಳಿಗೆ 225 ರೂಪಾಯಿ ದರ ನೀಡಲಾಗುತ್ತಿದೆ. ಗುಜರಾತ್‌ನಲ್ಲಿ ಅಸ್ತಿತ್ವದಲ್ಲೇ ಇರದ ರಚನಾ ಗ್ರೂಪ್ ಆಫ್ ಇಂಡಸ್ಟ್ರೀಸ್ ಎಂಬ ಕಂಪನಿ ಹೆಸರಿನಲ್ಲಿ ಸರಕಾರ ಸೀರೆ ಖರೀದಿಸುತ್ತಿದೆ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಸೂರತ್‌ನಿಂದ ಖರೀದಿಸಿ ತಂದ ಸೀರೆಗಳು ಮತ್ತು ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಸರಕಾರ ನೀಡಿದ ಸೀರೆಗಳನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು. ಸೀರೆ ಪೂರೈಸುತ್ತಿರುವ ಕಂಪನಿಯ ಮಾಲೀಕರು ಯಾರು ಎಂಬುದು ಇನ್ನೂ ಬಹಿರಂಗವಾಗಿಲ್ಲ.
ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್, ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರರಾದ ರಾಘವೇಂದ್ರ ಮತ್ತು ವಿಜಯೇಂದ್ರ ಅವರನ್ನು ಕೇಳಿದರೆ ತಿಳಿಯಬಹುದು ಎಂದು ವ್ಯಂಗ್ಯವಾಡಿದರು. ರಾಮನಗರದಲ್ಲಿ ನ.22ರಂದು ನಡೆಯಲಿರುವ ಸೀರೆ ವಿತರಣೆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತೇನೆ. ಜೆಡಿಎಸ್ ಕಾರ್ಯಕರ್ತರು ಮತ್ತು ನನ್ನ ಅಭಿಮಾನಿಗಳು ಕೂಡ ಪಾಲ್ಗೊಳ್ಳುತ್ತಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.