ರಾಜ್ಯದಲ್ಲಿ ನಾಲ್ಕು ಸಾವಿರ ಜೆಓಸಿ ಅರೆಕಾಲಿಕ ಶಿಕ್ಷಕರನ್ನು ಕಾಯಂಗೊಳಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಓಸಿ ಅರೆಕಾಲಿಕ ಶಿಕ್ಷಕರ ಸೇವೆಯನ್ನು ಕಾಯಂಗೊಳಿಸುವ ಬಗ್ಗೆ ಸಂಪುಟ ಸಭೆಗೆ ವಿಷಯ ಮಂಡನೆ ಮಾಡುವಂತೆ ಸಿಎಂ ಸೂಚಿಸಿದ್ದಾರೆ ಎಂದು ಹೇಳಿದರು. ಜೆಓಸಿ ಅರೆಕಾಲಿಕ ಶಿಕ್ಷಕರ ಬಗ್ಗೆ ಹಿಂದಿನ ಸರಕಾರಗಳು ಕೇವಲ ಬಾಯಿ ಮಾತಿನ ಭರವಸೆ ನೀಡಿದರೂ, ಬೇಡಿಕೆ ಮತ್ತು ಸಮಸ್ಯೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಗಮನ ನೀಡಿರಲಿಲ್ಲ ಎಂದರು.
ಮೊರಾರ್ಜಿ ಶಾಲೆ ಶಿಕ್ಷಕರನ್ನು ಈಗಾಗಲೇ ಕಾಯಂಗೊಳಿಸಲು ಸರಕಾರ ಕ್ರಮ ಕೈಗೊಂಡಿದೆ. ಅದೇ ರೀತಿ ಜೆಓಸಿ ಅರೆಕಾಲಿಕ ಶಿಕ್ಷಕರ ಸಮಸ್ಯೆಗೂ ಸ್ಪಂದಿಸಬೇಕು ಎನ್ನುವುದು ಸರಕಾರ ಉದ್ದೇಶವಾಗಿದೆ ಎಂದು ವಿವರಿಸಿದರು.
ರಾಜ್ಯದ ಎಲ್ಲ ಪ್ರೌಢಶಾಲೆಗಳಲ್ಲಿ ಹೆಲ್ತ್ ಕ್ಲಬ್‌ಗಳನ್ನು ಪ್ರಾರಂಭಿಸಲಾಗುತ್ತಿದೆ. ಯುವ ಜನರಲ್ಲಿ ಆರೋಗ್ಯ, ವ್ಯಾಯಾಮ, ಮತ್ತು ವಿಜ್ಞಾನದ ಬಗ್ಗೆ ತಿಳಿವಳಿಕೆ ನೀಡುವುದು ಸೇರಿದಂತೆ ನಾನಾ ಚಟುವಟಿಕೆಗಳನ್ನು ಈ ಮೂಲಕ ನಡೆಸುವ ಉದ್ದೇಶವಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸದ್ಯ ಪಠ್ಯ ಪುಸ್ತಕ ಸಮಸ್ಯೆ ಇಲ್ಲ. ಹೊಸ ನೀತಿ ಜಾರಿಗೆ ತಂದಿದ್ದರಿಂದ ಸಮಸ್ಯೆ ಉಂಟಾಗಿತ್ತು. ಆಗಿರುವ ಎಲ್ಲ ಲೋಪಗಳನ್ನು ಸರಿಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವರ್ಷ ಅಗತ್ಯವಿರುವ ಪಠ್ಯ ಪುಸ್ತಕಗಳ ಬಗ್ಗೆ ಈಗಲೇ ಮಾಹಿತಿ ಪಡೆದು ಪ್ರಕಟಣೆಗೆ ಆದೇಶ ನೀಡಲಾಗಿದೆ. ಶಾಲೆ ಸಮವಸ್ತ್ರ ವಿತರಣೆಯಲ್ಲಿಯೂ ಯಾವುದೇ ಸಮಸ್ಯೆಯೂ ಆಗುವುದಿಲ್ಲ. ಅದಕ್ಕೂ ತಕ್ಕ ಸಿದ್ಧತೆ ಮಾಡಲಾಗಿದೆ ಎಂದು ಹೇಳಿದರು.