ಮುಖ್ಯಮಂತ್ರಿ ಯಡಿಯೂರಪ್ಪಗೆ ಹುಚ್ಚು ಹಿಡ್ತಿದಿದೆ: ಧರಂಸಿಂಗ್
ಗುಲ್ಬರ್ಗ, ಗುರುವಾರ, 18 ನವೆಂಬರ್ 2010( 15:03 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾನಸಿಕವಾಗಿ ಘಾಸಿಗೊಂಡು ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೀದರ್ ಸಂಸದ ಎನ್.ಧರಂಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿನ ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಪತ್ರಕರ್ತರ ಜತೆಗೆ ಮಾತನಾಡಿದ ಅವರು, ನಾನು ಸಹ ಬಿಡಿಎ ನಿವೇಶನಕ್ಕಾಗಿ ಅರ್ಜಿ ಹಾಕಿದ್ದೇನೆ ಎಂದು ಹೇಳಿರುವ ಸಿಎಂಗೆ ತಲೆ ಕೆಟ್ಟಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ನಿತ್ಯವೂ ಬಿಜೆಪಿ ಸರಕಾರದ ಹಗರಣಗಳು ಬರುತ್ತಿರುವುದರಿಂದ ಮುಖ್ಯಮಂತ್ರಿಗಳಿಗೆ ತಾವೇನು ಮಾತನಾಡುತ್ತಿದ್ದೇನೆ ಎಂಬುದರ ಪರಿವೆ ಇಲ್ಲ ಎಂದು ಕಿಡಿಕಾರಿದರು. ಸಮಯ ಬಂದಾಗ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿರುವ ಹಗರಣಗಳನ್ನು ಬಯಲಿಗೆ ಎಳೆಯುವುದಾಗಿ ಹೇಳಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ನನ್ನ ಪುತ್ರಿ, ಈಗ ಮಂತ್ರಿಯಾಗಿರುವ ಶೋಭಾ ಕರಂದ್ಲಾಜೆ, ಶಾಂತಾ ವೀರನಗೌಡ ಮೊದಲಾದವರಿಗೆ ಮುಖ್ಯಮಂತ್ರಿ ವಿವೇಚನಾ ಕೋಟಾದಡಿ ನಿವೇಶನ ನೀಡಲಾಗಿದೆ. ಆದರೆ ಯಾವುದೆ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕುಟುಂಬದವರು ನುಂಗಿರುವ ಭೂ ಹಗರಣ, ಬಿಜೆಪಿ ಅಧ್ಯಕ್ಷ ಈಶ್ವರಪ್ಪನವರ ಭೂಹಗರಣ ಹೀಗೆ ಎಲ್ಲವೂ ಬಯಲಿಗೆ ಬರುತ್ತಿರುವುದರಿಂದ ಯಡಿಯೂರಪ್ಪಗೆ ಸಾರ್ವಜನಿಕರಿಗೆ ಏನು ಉತ್ತರ ಕೊಡಬೇಕು ಎಂಬುದು ಗೊತ್ತಾದೆ ಸತ್ಯವನ್ನು ಮರೆ ಮಾಚಲು ವಿಪಕ್ಷ ಮುಖಂಡರ ಮೇಲೆ ಆರೋಪ ಹೊರಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.