ಇಂಡಿ ಮತ್ತು ಬಸವನಬಾಗೇವಾಡಿ ವಿಧಾನಸಭೆ ಕ್ಷೇತ್ರಕ್ಕೆ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗೆ ಪಕ್ಷದ ಮೂಲ ಕಾರ್ಯಕರ್ತರಿಗೆ ಬಿಜೆಪಿ ಟಿಕೆಟ್ ನೀಡಲಾಗುವುದು. ಈ ಕುರಿತು ಹಬ್ಬಿರುವ ವದಂತಿಗಳೆಲ್ಲವೂ ಸುಳ್ಳು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಇಂಡಿ ಮತಕ್ಷೇತ್ರಕ್ಕೆ ಕಾಂಗ್ರೆಸ್‌ನ ಯಶವಂತರಾಯ ಗೌಡ ಪಾಟೀಲ ಹಾಗೂ ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಕಾಂಗ್ರೆಸ್‌ನ ಮಾಜಿ ಶಾಸಕ ಶಿವಾನಂದ ಪಾಟೀಲ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ವದಂತಿ ಹಬ್ಬಿತ್ತು. ಇದನ್ನು ಸಚಿವರು ಅಲ್ಲಗಳೆದರು.
ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದ ಕಾರ್ಯಕರ್ತರಿದ್ದಾರೆ. ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುತ್ತೇವೆ, ಅವರು ಖಂಡಿತ ಆಯ್ಕೆಯಾಗಲಿದ್ದಾರೆ ಎಂದರು.
ರಾಜ್ಯದಲ್ಲಿರುವ 5,628 ಗ್ರಾಪಂಗಳಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಈಗಾಗಲೇ 2,500 ಹುದ್ದೆಗಳನ್ನು ಪ್ರವೇಶ ಪರೀಕ್ಷೆ ಮೂಲಕ ನೇಮಕ ಮಾಡಲಾಗಿದೆ. ಇನ್ನೂ 1,250 ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಪ್ರವೇಶ ಪರೀಕ್ಷೆ ನಡೆಸಿ ನೇಮಕ ಮಾಡಲಾಗುವುದು. ಈ ನೇಮಕದಿಂದ ಗ್ರಾಪಂ ಆಡಳಿತ ವ್ಯವಸ್ಥೆ ಸುಧಾರಣೆ ಆಗಲಿದೆ. ಉಳಿದ ಹುದ್ದೆಗಳನ್ನು ಗ್ರಾಪಂ ಕಾರ್ಯದರ್ಶಿಗಳನ್ನು ಬಡ್ತಿ ಮೂಲಕ ತುಂಬಲಾಗುವುದು ಎಂದರು. ಈ ನೇಮಕಕ್ಕಾಗಿ ಸಚಿವ ಸಂಪುಟ ಹಾಗೂ ಆರ್ಥಿಕ ಇಲಾಖೆ ಅನುಮತಿ ನೀಡಿದೆ. ಒಂದೆರೆಡು ತಿಂಗಳಲ್ಲಿ ನೇಮಕ ಪ್ರಕ್ರಿಯೆ ಆರಂಭವಾಗಲಿದೆ ಎಂದರು.