ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭೂ ಹಗರಣ-ಎಲ್ಲಾ ಸೈಟ್ ವಾಪಸ್: ಸಿಎಂ ತಲೆದಂಡಕ್ಕೆ ಆಗ್ರಹ (BJP | Yeddyurappa | BDS | Congress | KIADB | JDS)
Bookmark and Share Feedback Print
 
PTI
ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರ, ಸಂಸದ ರಾಘವೇಂದ್ರ ಸೇರಿದಂತೆ ಕುಟುಂಬ ವರ್ಗಕ್ಕೆ ನೀಡಿದ್ದ ಬಿಡಿಎ ಸೈಟ್, ಕೆಐಎಡಿಬಿ ಜಮೀನನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಪಸ್ ಮಾಡುವ ಮೂಲಕ ಪ್ರತಿಪಕ್ಷಗಳ ಬಾಯ್ಮುಚ್ಚಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಏತನ್ಮಧ್ಯೆ ಭೂಹಗರಣಗಳ ಕುರಿತು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಮಾನ ಕೈಗೊಂಡಿದ್ದಾರೆ. ಆದರೆ ಮುಖ್ಯಮಂತ್ರಿಗಳ ವಿರುದ್ಧ ಬಿಜೆಪಿ ಸೇರಿದಂತೆ ವಿಪಕ್ಷಗಳು ರಾಜೀನಾಮೆಗೆ ಒತ್ತಾಯಿಸತೊಡಗಿರುವುದು ತ್ರಿಶಂಕು ಸ್ಥಿತಿ ಅನುಭವಿಸುವಂತೆ ಮಾಡಿದೆ.

ಬಿಜೆಪಿ ಹೈಕಮಾಂಡ್ ಸಹ ಮುಖ್ಯಮಂತ್ರಿಗಳ ಭೂ ಹಗರಣದ ಆರೋಪದ ಬಗ್ಗೆ ಅಸಮಾಧಾನ ಹೊಂದಿರುವುದು ನುಂಗಲಾರದ ತುತ್ತಾಗಿದೆ. ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ತಮ್ಮ ಕುಟುಂಬ ವರ್ಗ ಮತ್ತು ಸಂಬಂಧಿಗಳ ನೀಡಿದ ಜಮೀನು, ಸೈಟ್ ಅನ್ನು ವಾಪಸ್ ಸಿಎಂ ವಾಪಸ್ ಮಾಡಿದ್ದಾರೆ.

ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ನೀಡಿದ್ದ ಬಿಡಿಎ ಸೈಟ್ ವಾಪಸ್, ಮುಖ್ಯಮಂತ್ರಿ ತಂಗಿ ಪ್ರೇಮಮ್ಮಗೆ ನೀಡಿದ್ದ ಬಿಡಿಎ ಸೈಟ್, ಮುಖ್ಯಮಂತ್ರಿ ತಂಗಿ ಮಗ ಅರವಿಂದ ಪತ್ನಿ ದೀಪಾಗೆ ನೀಡಿದ್ದ ಬಿಡಿಎ ಸೈಟ್ ಹಾಗೂ ಪುತ್ರಿ ಉಮಾದೇವಿ ಒಡೆತನದ ಕ್ಯಾಂಡರ್ ಸಂಸ್ಥೆಗೆ ನೀಡಿದ್ದ ಕೆಐಎಡಿಬಿ ಜಮೀನನ್ನು ಈಗಾಗಲೇ ವಾಪಸ್ ಮಾಡಲಾಗಿದೆ.

ಸೈಟ್ ವಾಪಸ್ ಕೊಟ್ಟ ಕೂಡಲೇ ಎಲ್ಲ ಮುಗಿದಿಲ್ಲ-ಎಚ್‌ಡಿಕೆ
ಭೂ ಹಗರಣದ ಆರೋಪದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಡಿಎ ಸೈಟ್, ಜಮೀನು ವಾಪಸ್ ಕೊಡುವ ಮೂಲಕ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಂತಾಗಿದೆ. ಒಬ್ಬ ಕಳ್ಳ ಮನೆ ಲೂಟಿ ಮಾಡಿ ಪೊಲೀಸರು ಬಂಧಿಸಿದ ಮೇಲೆ, ತಾನು ಕದ್ದ ವಸ್ತು ವಾಪಸ್ ಕೊಡುತ್ತೇನೆ. ನನ್ನನ್ನು ಬಿಟ್ಟು ಬಿಡಿ ಎಂದರೆ ಕಾನೂನು ಒಪ್ಪುತ್ತದೆಯೇ ಎಂದು ಪ್ರಶ್ನಿಸಿರುವ ಅವರು, ಮುಖ್ಯಮಂತ್ರಿ ತಪ್ಪಿಗೆ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ.

ಭೂ ಹಗರಣದಿಂದ ರಾಜ್ಯದ ಬೊಕ್ಕಸಕ್ಕೆ ಸಾಕಷ್ಟು ನಷ್ಟ ಮಾಡಿದ್ದಾರೆ. ಹಾಗಾಗಿ ನೈತಿಕತೆ ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ. ಕೇಂದ್ರ ಸಚಿವ ಎ.ರಾಜಾ ಕೂಡ 2ಜಿ ಸ್ಪೆಕ್ಟ್ರಂ ಹಗಣರ ಕುರಿತಂತೆ ತಾನು ಮಾಡಿರುವ ಆದೇಶ ವಾಪಸ್ ತೆಗೆದುಕೊಳ್ಳುತ್ತೇನೆ. ಈ ಬಗ್ಗೆ ಪ್ರಧಾನಿ ಜೊತೆ ಮಾತಾಡಿ ವಿವರಿಸಿದ್ದೇನೆ. ರಾಜೀನಾಮೆ ನೀಡುವುದಿಲ್ಲ ಎಂದಿದ್ದರೆ ಬಿಜೆಪಿ ಇದಕ್ಕೆ ಒಪ್ಪುತ್ತಿತ್ತೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ದೇವರಿಗೆ ಮಾತ್ರ ಹೆದರೋದು: ಬಿ.ವೈ.ರಾಘವೇಂದ್ರ
ನಾನು ಮುಖ್ಯಮಂತ್ರಿ ಮಗನಾಗಿ ಪ್ರಭಾವ ಬಳಿಸಿಕೊಂಡು ಯಾವುದೇ ಸೈಟ್ ಖರೀದಿಸಿಲ್ಲ. ಕಾನೂನು ಬದ್ದವಾಗಿಯೇ ಸೈಟ್ ಪಡೆದಿದ್ದೇನೆ. ನಾನೊಬ್ಬ ಸಂಸದ. ವಿರೋಧ ಪಕ್ಷಗಳು ದ್ವೇಷದ ರಾಜಕಾರಣ ಮಾಡಿ ನಮ್ಮ ಮೇಲೆ ಆರೋಪ ಹೊರಿಸುತ್ತಿವೆ. ಆದರೂ ನಾವು ನಮ್ಮ ಸೈಟ್ ಅನ್ನು ವಾಪಸ್ ಮಾಡಿದ್ದೇವೆ. ಈ ಬಗ್ಗೆ ಯಾವುದೇ ತನಿಖೆಗೂ ಸಿದ್ದ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ವಿರೋಧ ಪಕ್ಷಗಳು ಅನಾವಶ್ಯಕವಾಗಿ ಅಪಪ್ರಚಾರ ಮಾಡುತ್ತಿವೆ. ತಾವು ದೇವರು ಬಿಟ್ಟು ಬೇರೆ ಯಾರಿಗೂ ಹೆದರುವುದಿಲ್ಲ. ಯಾವ ತನಿಖೆಗೂ ಸಿದ್ದ ಎಂದು ಈ ಸಂದರ್ಭದಲ್ಲಿ ಹೇಳಿದರು.

ಸಿಎಂ ಯಾಕೆ ರಾಜೀನಾಮೆ ನೀಡುತ್ತಿಲ್ಲ: ಬಿ.ಕೆ.ಹರಿಪ್ರಸಾದ್
ಕೇವಲ ಆರೋಪಗಳಿಂದಾಗಿಯೇ ಕೇಂದ್ರ ಸಚಿವ ಎ.ರಾಜಾ, ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ರಾಜೀನಾಮೆ ನೀಡಿದ್ದಾರೆ. ಭೂ ಹಗರಣದ ಆರೋಪದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಯಾಕೆ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

ಬಿಡಿಎ ಸೈಟ್, ಜಮೀನು ವಾಪಸ್ ಮಾಡಿದ ಕೂಡಲೇ ಮಾಡಿದ ತಪ್ಪು ಮುಚ್ಚಿಹಾಕಲು ಸಾಧ್ಯವೆ? ಜಮೀನು ವಾಪಸ್ ಮಾಡಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ದೇವರ ಮುಂದೆಯೂ(ನಂಜುಂಡೇಶ್ವರ ಮೇಲೆ ಆಣೆ) ತಪ್ಪೊಪ್ಪಿಕೊಂಡಿದ್ದಾರೆ. ಹಾಗಾಗಿ ನ್ಯಾಯಾಂಗ ತನಿಖೆ ಯಾವ ಪುರುಷಾರ್ಥಕ್ಕೆ ಎಂದು ಕಿಡಿಕಾರಿದ್ದಾರೆ.

ನಾಯಕತ್ವ ಬದಲಾವಣೆ ಪ್ರಶ್ನೆಗೆ ಸಿಎಂ ಮೌನ:
ಭೂ ಹಗರಣ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ತಪ್ಪು ಮಾಹಿತಿ ನೀಡಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿರುವುದಾಗಿ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ ದೆಹಲಿಗೆ ತೆರಳಿ ಪಕ್ಷದ ವರಿಷ್ಠರು ಹಾಗೂ ಕಾಂಗ್ರೆಸ್ ಮುಖಂಡರಿಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.

ಶುಕ್ರವಾರ ಹುಬ್ಬಳ್ಳಿಗೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರು, ನಾಯಕತ್ವ ಬದಲಾವಣೆ ಕುರಿತು ಪ್ರಶ್ನಿಸಿದಾಗ, ಅದಕ್ಕೆ ಯಾವುದೇ ಉತ್ತರ ನೀಡದ ಅವರು ಮಾಧ್ಯಮದವರು ನಾಯಕತ್ವ ಬದಲಾವಣೆ ಬಯಸುತ್ತೀರಾ ಎಂದು ಮರು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದ ವಿರುದ್ಧ ಗರಂ ಆಗಿದ್ದ ಅವರು ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಈಗ ನಮ್ಮ ಪ್ರತಿಕ್ರಿಯೆಗೆ ಮಹತ್ವವಿಲ್ಲ, ನೀವು ವಿರೋಧ ಪಕ್ಷದ ಮುಖಂಡರ ಪ್ರತಿಕ್ರಿಯೆ ಕೇಳಿ ಎಂದು ಅಸಮಾಧಾನದಿಂದಲೇ ಉತ್ತರಿಸಿದ್ದ ಮುಖ್ಯಮಂತ್ರಿಗಳಲ್ಲಿ, ನಿಮ್ಮ ಪ್ರತಿಕ್ರಿಯೆಯೂ ಅಗತ್ಯ ಎಂದಾಗ, ಹೌದಾ...ನನಗೆ ಗೊತ್ತೇ ಇರಲಿಲ್ಲ ಎಂದು ವ್ಯಂಗ್ಯವಾಗಿ ನುಡಿದರು. ಈಗಾಗಲೇ ಬಿಡಿಎ, ಕೆಐಎಡಿಬಿ ಜಮೀನು ವಾಪಸ್ ಮಾಡಿದ್ದೇನೆ. 1994ರಿಂದ (ದೇವೇಗೌಡರ ಕಾಲ ಸೇರಿ) ಈವರೆಗೆ ನಡೆದ ಎಲ್ಲಾ ಹಗರಣವನ್ನು ನ್ಯಾಯಾಂಗ ತನಿಖೆ ಮಾಡಲು ಆದೇಶ ನೀಡಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ