ಅದಿರು ರಫ್ತು ನಿಷೇಧ;ಸರಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್
ಬೆಂಗಳೂರು, ಶುಕ್ರವಾರ, 19 ನವೆಂಬರ್ 2010( 15:47 IST )
NRB
ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಣೆ ನಿಯಂತ್ರಿಸುವ ನಿಟ್ಟಿನಲ್ಲಿ ಕಬ್ಬಿಣದ ಅದಿರು ರಫ್ತು ನಿಷೇಧಿಸಿ ರಾಜ್ಯ ಸರಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಶುಕ್ರವಾರ ಎತ್ತಿಹಿಡಿದಿದ್ದು, ಗಣಿ ಕಂಪನಿಗಳು ಮುಖಭಂಗ ಅನುಭವಿಸಿವೆ.
ರಾಜ್ಯದ ಬಂದರುಗಳ ಮೂಲಕ ಅದಿರು ರಫ್ತು ಮತ್ತು ರಫ್ತು ಉದ್ದೇಶಕ್ಕಾಗಿ ಅದಿರು ಸಾಗಣೆ ನಿಷೇಧಿಸಿ ಸರಕಾರ ಹೊಡಿಸಿದ್ದ ಆದೇಶ ಪ್ರಶ್ನಿಸಿ ವಿ.ಎಸ್.ಲಾಡ್ ಅಂಡ್ ಸನ್ಸ್ ಸೇರಿದಂತೆ ಹಲವು ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಈ ಗಣಿ ಕಂಪನಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ವಿಭಾಗೀಯ ಪೀಠ, ರಾಜ್ಯ ಸರಕಾರದ ಆದೇಶ ಎತ್ತಿ ಹಿಡಿದಿದೆ.
'ಅದಿರು ದೇಶದ ಸಂಪತ್ತು. ದೇಶದ ಸಂಪತತು ಹೊರಹೋಗಬಾರದು ಎಂಬ ನಿಟ್ಟಿನಲ್ಲಿ ರಾಜ್ಯ ಸರಕಾರ ಕೈಗೊಂಡ ನಿರ್ಧಾರ ಸರಿಯಾದದ್ದು' ಎಂದು ನ್ಯಾಯಪೀಠ ಅಭಿಪ್ರಾಯವ್ಯಕ್ತಪಡಿಸಿದೆ. ಅಲ್ಲದೇ ಆರು ತಿಂಗಳೊಳಗೆ ಅಕ್ರಮ ಗಣಿಗಾರಿಕೆ ನಿಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದ್ದು, ಈ ಬಗ್ಗೆ ಸರಕಾರ ಸಾಧ್ಯವಾದ ಎಲ್ಲಾ ಕಠಿಣ ಕ್ರಮ ಕೈಗೊಳ್ಳಲಿ ಎಂದು ನಿರ್ದೇಶನ ನೀಡಿದೆ.
ರಾಜ್ಯದಲ್ಲಿನ ಅದಿರು ಲೂಟಿ ನಡೆಯುತ್ತಿದ್ದರೂ ರಾಜ್ಯ ಸರಕಾರ ಕಣ್ಮುಚ್ಚಿ ಕುಳಿತಿದೆ ಎಂದು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗೋಸ್ಟ್ 6ರಂದು ಅದಿರು ರಫ್ತು ನಿಷೇಧದ ಆದೇಶ ಹೊರಡಿಸಿದ್ದರು.
ಆದರೆ ರಾಜ್ಯದಲ್ಲಿ ಅದಿರು ರಫ್ತು ನಿಷೇಧಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಇಲ್ಲ ಎಂದು ಕೆಲವು ಗಣಿ ಕಂಪನಿಗಳು ಸರಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದವು. ಒಟ್ಟಾರೆ ಅದಿರು ರಫ್ತು ನಿಷೇಧ ಕುರಿತಂತೆ ಸರಕಾರದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿಯುವ ಮೂಲಕ ಗಣಿಕಂಪನಿ ಮಾಲೀಕರು ಮುಖಭಂಗಕ್ಕೆ ಒಳಗಾದಂತಾಗಿದೆ.