ತಾನೇನಾದರೂ ಅಕ್ರಮ ಮಾಡಿದ್ದರೆ ರಾಜಕೀಯವನ್ನೇ ಬಿಟ್ಟುಬಿಡುತ್ತೇನೆ ಎಂದಿದ್ದರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಆದರೆ ಅಕ್ರಮಗಳಿಗೆ ಅವರೇನೂ ಹೊರತಲ್ಲ ಎಂಬುದು ದಾಖಲೆ ಸಹಿತ ಬಯಲಾಗಿದೆ.
ಕುಮಾರಸ್ವಾಮಿ ಪತ್ನಿ ಹೆಸರಿಗೆ ಜಮೀನು 'ಉಡುಗೊರೆ' ದೊರೆತ ಬಗೆಗಿನ ವರದಿಯೊಂದನ್ನು ಡೆಕ್ಕನ್ ಕ್ರೋನಿಕಲ್ ಪ್ರಕಟಿಸಿದ್ದು, ಈ ಕುರಿತಾದ ದಾಖಲೆಗಳು ತನ್ನಲ್ಲಿವೆ ಎಂದು ಪತ್ರಿಕೆ ಹೇಳಿಕೊಂಡಿದೆ.
180 ಎಕ್ರೆ ವಿಸ್ತಾರದ ಲೇಔಟ್‌ಗಾಗಿ ಸರಕಾರಿ ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಗಿರಿನಗರದ ಸೊಸೈಟಿಯೊಂದರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿತ್ತು. ಈ ಕೇಸು ಹೈಕೋರ್ಟಿನವರೆಗೂ ಹೋಯಿತು. ಆದರೆ, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ, ಭೂಮಿ ನೀಡುವಂತೆ ಸೊಸೈಟಿಯು ಅವರ ಮೊರೆ ಹೋಗಿತ್ತು.
2006ರಲ್ಲಿ ಕುಮಾರಸ್ವಾಮಿ ಅವರು ಈ ಜಮೀನನ್ನು 'ಬಡ ಹೂಡಿಕೆದಾರರ ಹಿತಾಸಕ್ತಿ'ಯ ಕಾರಣ ನೀಡಿ ಡೀನೋಟಿಫೈ ಮಾಡಿದರು. ಕೆಲವೇ ದಿನಗಳಲ್ಲಿ ಸೊಸೈಟಿಯು 16500 ಚದರ ಅಡಿ ಪ್ರದೇಶವನ್ನು ಎಚ್‌ಡಿಕೆ. ಪತ್ನಿ ಅನಿತಾ ಕುಮಾರಸ್ವಾಮಿಗೆ 'ಉಡುಗೊರೆ' ರೂಪದಲ್ಲಿ ನೀಡಿತು. ಈ ಪ್ರೈಮ್ ಜಮೀನನ್ನು ಕೇವಲ 14 ಲಕ್ಷ ರೂಪಾಯಿಗಳಿಗೆ ನೋಂದಣಿ ಮಾಡಿಸಲಾಯಿತು. ಆದರೆ ಅದರ ಮಾರುಕಟ್ಟೆ ಬೆಲೆ 8.25 ಕೋಟಿ ರೂ. ಆಗಿತ್ತು.
ಸೊಸೈಟಿಯ ಹಲವು ಸದಸ್ಯರು ತಮಗೂ ಭೂಮಿ ಬೇಕೆಂದು ಕೋರ್ಟ್ ಮೊರೆ ಹೋಗಿದ್ದರು. ಕೆಲವು ಅರ್ಜಿದಾರರಿಗೆ ಎಚ್‌ಡಿಕೆಗೆ ದೊಡ್ಡ ಪ್ಲಾಟ್ ನೀಡಿರುವುದು ತಿಳಿದಾಗ, ಎಲ್ಲವನ್ನೂ ಬಯಲು ಮಾಡುತ್ತೇವೆ ಎಂದು ಸೊಸೈಟಿಗೆ ಬೆದರಿಕೆಯೊಡ್ಡಿದರು. ಅನಿತಾ ಅವರು ಸೊಸೈಟಿ ಸದಸ್ಯರಲ್ಲ, ಹೀಗಾಗಿ ಸೊಸೈಟಿ ದರದಲ್ಲಿ ಅದನ್ನು ನೋಂದಾಯಿಸಿಕೊಳ್ಳುವ ಹಕ್ಕು ಇರಲಿಲ್ಲ.
ಪರಿಸ್ಥಿತಿ ಬಿಗಡಾಯಿಸಿತು ಎಂಬುದನ್ನು ಅರಿತುಕೊಂಡಾಗ, ಅನಿತಾ ಹೆಸರಲ್ಲಿದ್ದ ಜಮೀನನ್ನು ಎರಡೇ ತಿಂಗಳಲ್ಲಿ ಜಮೀನನ್ನು ಮರಳಿ ಸೊಸೈಟಿ ಕಾರ್ಯದರ್ಶಿಗೇ ಒಪ್ಪಿಸಬೇಕಾದ ಅನಿವಾರ್ಯತೆ ಉಂಟಾಯಿತು. ಆದರೂ, ಕುಮಾರಸ್ವಾಮಿ ಕುಟುಂಬವು ರಾಜ್‌ಕುಮಾರ್ ರಸ್ತೆಯಲ್ಲಿರುವ ಆ ಜಮೀನಿಗೆ ಈಗಲೂ ಬೇಲಿ ಹಾಕಿಕೊಂಡು ಕುಳಿತಿದೆ ಎಂದು ಮೂಲಗಳು ಹೇಳಿವೆ. ಸತ್ಯ ಯಾವುದು ಎಂಬುದು ತನಿಖೆಯಿಂದಲೇ ಹೊರಬರಬೇಕಿದೆ.