ಭೂ ಹಗರಣಗಳಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸವಾಲು ಹಾಕಿದ್ದಾರೆ.
ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಏರ್ಪಡಿಸಿದ್ದ ಇಂದಿರಾಗಾಂಧಿ ಅವರ ಹುಟ್ಟುಹಬ್ಬ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್‌ನಲ್ಲಿ ಯಾರೂ ಮಕ್ಕಳು, ಮೊಮ್ಮಕ್ಕಳಿಗೆ ಭೂಮಿ ನೀಡಿಲ್ಲ, ಆದರೆ ಯಡಿಯೂರಪ್ಪ ಅವರು ಮಕ್ಕಳು, ಮೊಮ್ಮಕ್ಕಳು, ಸಂಬಂಧಿಕರಿಗೆ ಅಪಾರ ಪ್ರಮಾಣದ ಭೂಮಿಯನ್ನು ಅಕ್ರಮವಾಗಿ ನೀಡಿದ್ದು, ಇಂತಹ ಭ್ರಷ್ಟ ಮುಖ್ಯಮಂತ್ರಿ ಒಂದು ಕ್ಷಣವೂ ಅಧಿಕಾರದಲ್ಲಿ ಇರಲು ಅರ್ಹತೆ ಹೊಂದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪದೇ ಪದೇ ಭಾಷಣದಲ್ಲಿ 60 ವರ್ಷಗಳಲ್ಲಿ ಕಾಂಗ್ರೆಸ್ ಮಾಡದ ಸಾಧನೆಯನ್ನು ಕೇವಲ ಎರಡು ವರ್ಷಗಳಲ್ಲಿ ಮಾಡಿದ್ದೇವೆ ಎನ್ನುತ್ತಾರೆ. ಸಾವಿರಾರು ಕೋಟಿ ರೂಪಾಯಿಗಳ ಭೂಕಬಳಿಕೆ ಇವರ ಸಾಧನೆಯೇ ಎಂದು ಪ್ರಶ್ನಿಸಿದರು.
ಮುಂದಿನ 20 ವರ್ಷಗಳ ಕಾಲ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತಕ್ಕೆ ಬರುವುದಿಲ್ಲ ಎಂದು ಹೇಳುವ ಯಡಿಯೂರಪ್ಪ, ಪಂಚಾಂಗ ನೋಡುತ್ತಾರಾ ಎಂದು ವ್ಯಂಗ್ಯವಾಡಿದರು. ಯಡಿಯೂರಪ್ಪ ಅವರ ಎರಡೂವರೆ ವರ್ಷಗಳ ಅಧಿಕಾರದಿಂದ ರಾಜ್ಯಕ್ಕೆ ಈ ಗತಿ ಬಂದಿದೆ. ಇದನ್ನು ತಡೆಯದಿದ್ದರೆ ಸಮಾಜ ಕುಲಗೆಟ್ಟು ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂದಿರಾಗಾಂಧಿಯವರ ತ್ಯಾಗ, ಬಲಿದಾನದಿಂದ ಭಾರತ ಸುಭದ್ರ ದೇಶವಾಗಿದ್ದು, ಜಾತಿ-ಜಾತಿಗಳ ನಡುವೆ ಸಾಮರಸ್ಯ, ಧರ್ಮ ಧರ್ಮಗಳ ನಡುವೆ ಸಮಾನತೆ ತಂದ ಕೀರ್ತಿ ಇಂದಿರಾಗಾಂಧಿ ಅವರದು ಎಂದು ಈ ಸಂದರ್ಭದಲ್ಲಿ ಹೇಳಿದರು.