ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಾವು ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುವ ಮೂಲಕ ಆರೋಪಿ ನಂ.1 ಪಟ್ಟಿಯಲ್ಲಿದ್ದಾರೆ. ಸರಕಾರಿ ಅಧಿಕಾರಿಗಳು ನಂ.2 ಸ್ಥಾನದಲ್ಲಿದ್ದಾರೆ. ಇಷ್ಟೆಲ್ಲ ಕಣ್ಣಿಗೆ ಕಾಣುವಂತೆ ನಡೆದಿದ್ದರೂ ಬಿಜೆಪಿ ಹೈಕಮಾಂಡ್ ವರಿಷ್ಠರು ಯಾಕೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಖಾರವಾಗಿ ಪ್ರಶ್ನಿಸಿದ್ದಾರೆ.
ಯಡಿಯೂರಪ್ಪ ತಾವು ತಪ್ಪು ಮಾಡಿರುವುದನ್ನು ಪದೇ ಪದೇ ಒಪ್ಪಿಕೊಂಡಿದ್ದಾರೆ. ನಂಜುಂಡೇಶ್ವರನ ಆಣೆಗೂ ಇನ್ನು ತಪ್ಪು ಮಾಡುವುದಿಲ್ಲ ಎಂದಿದ್ದಾರೆ. ಇನ್ನು ಮುಂದೆ ತಪ್ಪು ಮಾಡುವುದಿಲ್ಲ ಎಂಬುದರ ಅರ್ಥ, ಈ ಹಿಂದೆ ತಪ್ಪು ಮಾಡಿದ್ದೇನೆ ಎಂದಲ್ಲವೆ ಅಂತ ವ್ಯಂಗ್ಯವಾಡಿದ್ದಾರೆ.
ಇಷ್ಟೆಲ್ಲ ಮಾಡಿದ ಮೇಲೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿದ್ದಾರೆ. ಹಾಗಾಗಿ ಇನ್ನೂ ಅಧಿಕಾರದಲ್ಲಿ ಮುಂದುವರಿಯುತ್ತೇನೆ ಎಂದರೆ ಅದರಲ್ಲಿ ಅರ್ಥವಿಲ್ಲ. ಹಾಗೇನಾದರೂ ಇವರು ಅಧಿಕಾರದಲ್ಲಿ ಮುಂದುವರಿದರೆ ಇನ್ನಷ್ಟು ಗುಡಿಸಿ ಗುಂಡಾಂತರ ಮಾಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಯಡಿಯೂರಪ್ಪನವರ ಕರ್ಮಕಾಂಡ ಈ ಮಟ್ಟದಲ್ಲಿ ನಡೆದಿದ್ದರೂ ಬಿಜೆಪಿ ಹೈಕಮಾಂಡ್ ವರಿಷ್ಠರ ನಡವಳಿಕೆ ಶಂಕಾಸ್ಪದವಾಗಿದೆ. ರಾಷ್ಟ್ರಮಟ್ಟದಲ್ಲಿ ನೈತಿಕತೆಯ ವಾರಸುದಾರರಂತೆ ಮಾತನಾಡುವ ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು ಮತ್ತಿತರ ನಾಯಕರು ಯಡಿಯೂರಪ್ಪ ಅವರ ಹಗರಣಗಳನ್ನು ನೋಡಿಯೂ ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿದರು.
ಇವರಿಗೆ ಮಾನ ಮರ್ಯಾದೆ ಎಂದಿದ್ದರೆ ಒಂದು ನಿಮಿಷ ಕೂಡ ಯಡಿಯೂರಪ್ಪ ಅವರನ್ನು ಹುದ್ದೆಯಲ್ಲಿ ಮುಂದುವರಿಯಲು ಬಿಡಬಾರದು. ತಕ್ಷಣವೇ ರಾಜೀನಾಮೆ ಪಡೆದು ಮನೆಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.