ಇನ್ಮುಂದೆ ಕಾನೂನು ಬಾಹಿರವಾಗಿ ಯಾವುದೇ ಕೆಲಸ ಮಾಡಲ್ಲ ನಂಜುಂಡೇಶ್ವರನ ಮೇಲೆ ಆಣೆ ಎಂದು ಹೇಳಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೀಗ ಕ್ಷಮೆ ಕೇಳೋ ತಪ್ಪು ನಾನೇನೂ ಮಾಡಿಲ್ಲ...ಜೀವಮಾನದಲ್ಲೇ ಅಂಥಾ ಪ್ರಶ್ನೆ ಬರಲ್ಲ. ನಮ್ಮ ಅಭಿವೃದ್ಧಿ ಕೆಲಸದ ಬಗ್ಗೆ ಪಕ್ಷದ ಅಧ್ಯಕ್ಷ ಗಡ್ಕರಿಯವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ನವದೆಹಲಿಯಲ್ಲಿ ಈ ರೀತಿಯಾಗಿ ತಮ್ಮ ಅಣಿಮುತ್ತನ್ನು ಉದುರಿಸಿದ್ದಾರೆ.
ನೈತಿಕ ನೆಲಗಟ್ಟಿನ ಮೇಲೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಬೇಕಾ ಇಂತಹ ಊಹಾಪೋಹದ ಪ್ರಶ್ನೆಗಳಿಗೆ ನಾನು ಉತ್ತರ ಕೊಡಲ್ಲ. ಇಂತಹ ರಾಕ್ಷಸರ (ಕಾಂಗ್ರೆಸ್, ಜೆಡಿಎಸ್) ಮಧ್ಯೆ ರಾಜ್ಯಾಡಳಿತ ಮಾಡುತ್ತಿರುವ ಈ ಯಡಿಯೂರಪ್ಪ ಹೇಗೆ ನಿದ್ದೆ ಮಾಡ್ತಾನೆ...ಈ ಯಡಿಯೂರಪ್ಪನ ಹೋರಾಟದಿಂದಲೇ ಈ ಸರಕಾರ ಇಂದು ಅಸ್ತಿತ್ವದಲ್ಲಿದೆ.
ಭೂ ಹಗರಣವೇ ನಡೆದಿಲ್ಲವಲ್ಲ ಏನಾಗಿದೆ...ಯಾವುದು ಹೇಳಬೇಕಲ್ಲ...ಅದನ್ನೇ ನಾನು ನಮ್ಮ ಅಧ್ಯಕ್ಷರಾದ ಗಡ್ಕರಿ ಅವರಿಗೆ ಹೇಳಲು ಬಂದಿದ್ದೇನೆ. ಪಕ್ಷದ ಹೈಕಮಾಂಡ್ ಕರೆಯ ಮೇರೆಗೆ ಶುಕ್ರವಾರ ರಾತ್ರಿ ಹೊತ್ತಿಗೆ ದಿಲ್ಲಿಗೆ ಬಂದಿಳಿದ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸರಕಾರದ ಭೂ ಹಗರಣಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದರು.!
ದೇವೇಗೌಡರ ಕಾಲದಿಂದ ಇಲ್ಲಿಯವರೆಗೆ ನಡೆದ ಎಲ್ಲಾ ಭೂ ಹಗರಣಗಳ ಕುರಿತು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಯೊಬ್ಬರ ಹೆಸರಿನ ಸಮೇತ ನ್ಯಾಯಾಂಗ ತನಿಖೆಯ ಸರಕಾರಿ ಅಧಿಸೂಚನೆಯನ್ನು ಇನ್ನೆರಡು ದಿನಗಳಲ್ಲಿ ಹೊರಡಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ನಿಮಗೇ ಯಾಕಿಷ್ಟು ಅಡ್ಡಿ, ಆತಂಕ, ರಂಪಾಟ, ಇದಕ್ಕೆ ನಿಮ್ಮ ನಡವಳಿಕೆಯ ದೋಷ ಕಾರಣವೇ, ಗುಜರಾತಿನ ಮುಖ್ಯಮಂತ್ರಿ ಮೋದಿಗೆ ಯಾಕೆ ಇಂಥ ಕಾಟ ಇಲ್ಲ ಎಂಬ ಪ್ರಶ್ನೆಗೆ, ನನ್ನ ನಡವಳಿಕೇಲಿ ದೋಷ ಇದ್ದಿದ್ರೆ ನೂರಾ ಹತ್ತು ಸೀಟು ಗೆಲ್ತಿದ್ದೆನೇನು ಈ ಯಡಿಯೂರಪ್ಪನ ಹೋರಾಟದಿಂದಲೇ ಈ ಸರಕಾರ ಇಂದು ಅಸ್ತಿತ್ವದಲ್ಲಿದೆ. ದೇಶದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಲೋಕಸಭಾ ಸದಸ್ಯರನ್ನು ನಾವು ಗೆಲ್ಲಿಸಿ ಕಳುಹಿಸಿದ್ದೇವೆ. ಮೋದಿ ಈಗ ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿಲ್ಲ. ಇದು ಅವರ ಮೂರನೆಯ ಅವಧಿ. ಇಂಥ ರಾಕ್ಷಸರ ನಡುವೆ ಆಡಳಿತ ನಡೆಸುತ್ತ ಹೇಗೆ ನಿದ್ದೆ ಮಾಡ್ತಾನೆ ಯಡಿಯೂರಪ್ಪ ಗೊತ್ತೇನ್ರಿ ಎಂದು ಪ್ರಶ್ನಿಸಿದರು.
ನಾನು ಎಲ್ಲವನ್ನೂ ಕಾನೂನಿನ ಚೌಕಟ್ಟಿನಲ್ಲಿ ಮಾಡಿದ್ದೇನೆ. ಅವ್ಯವಹಾರಗಳೆಲ್ಲ ಆಗಿರೋದು ಹಿಂದಿನ ಸರಕಾರಗಳಲ್ಲಿ ಆಗಿರೋದು ಎಂದು ಸಮಜಾಯಿಷಿ ನೀಡಿದರು.
ಯಡಿಯೂರಪ್ಪ ಸಿಎಂ ಕುರ್ಚಿ ಉಳಿಯುತ್ತಾ? ಭೂ ಹಗರಣದಲ್ಲಿ ಸುಳಿಯಲ್ಲಿ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ರಾತ್ರಿ ನವದೆಹಲಿಗೆ ತೆರಳಿ ಪಕ್ಷದ ವರಿಷ್ಠರ ಜತೆ ಮಾತುಕತೆ ನಡೆಸಿದ್ದಾರೆ. ಶನಿವಾರ ಮುಂಜಾನೆ 2ಗಂಟೆವರೆಗೂ ಸಭೆ ನಡೆಸಿದ ವರಿಷ್ಠರು, ಭೂ ಹಗರಣದ ಹಿನ್ನೆಲೆಯಲ್ಲಿ ರಾಜ್ಯದ ನಾಯಕರ ಅಭಿಪ್ರಾಯಗಳನ್ನು ಪ್ರತ್ಯೇಕವಾಗಿ ಆಲಿಸಿದ್ದರು. ಆದರೆ ಅಂತಿಮ ನಿರ್ಧಾರವೇನು ಎಂಬುದನ್ನು ಹೊರಹಾಕಿಲ್ಲ.
ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ, ಅರುಣ್ ಜೇಟ್ಲಿ, ಆರ್ಎಸ್ಎಸ್ ಮುಖಂಡ ರಾಮ್‌ಲಾಲ್ ಮತ್ತು ಸತೀಶ್ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಅಡ್ವಾಣಿ, ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು, ರಾಜನಾಥ್ ಸಿಂಗ್ ಸೇರಿದಂತೆ ಹಲವು ಮುಖಂಡರು ಗೈರುಹಾಜರಾಗಿದ್ದರು.
ಒಟ್ಟಾರೆ ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯದ ತೀರ್ಮಾನ ತ್ರಿಶಂಕು ಸ್ಥಿತಿಯಲ್ಲೇ ಮುಂದುವರಿದಿದೆ. ಸಭೆಯ ನಂತರ ಸುದ್ದಿಗಾರರಿಗೂ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಸರಕಾರದ ಹಿತದೃಷ್ಟಿಯಿಂದ ಸೂಕ್ತ ತೀರ್ಮಾನ ಕೈಗೊಳ್ಳುವ ಭರವಸೆಯನ್ನು ಗಡ್ಕರಿ ಮತ್ತು ಜೇಟ್ಲಿ ರಾಜ್ಯದ ಮುಖಂಡರಿಗೆ ನೀಡಿದ್ದಾರೆಂದು ಮೂಲವೊಂದು ತಿಳಿಸಿದೆ.