ಇಂಧನ ಸಚಿವೆ ಶೋಭಾ ಕರಂದ್ಲಾಜೆ ಭ್ರಷ್ಟಾಚಾರದ ಆರೋಪಕ್ಕೆ ಸವಾಲು ಹಾಕಿರುವುದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದು, 'ನನ್ನನ್ನು ಕೆಣಕಬೇಡಿ...ಶೋಭಾ ಮಹಿಳೆ ಅಂತ ಸುಮ್ಮನಿದ್ದೇನೆ' ಎಂದು ಧಮಕಿ ಹಾಕಿದ್ದಾರೆ.
ಶೋಭಾ ಕರಂದ್ಲಾಜೆ ವಿರುದ್ಧ ಕುಮಾರಸ್ವಾಮಿ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಭ್ರಷ್ಟಾಚಾರ ಎಸಗಿ ಆಸ್ತಿ ಮಾಡಿಕೊಂಡಿರುವುದಾಗಿ ಆರೋಪಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಶೋಭಾ, ನಾನು ಇದುವರೆಗೂ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಇನ್ನು ಮುಂದೆಯೂ ಮಾಡುವುದಿಲ್ಲ. ತಾಕತ್ತಿದ್ದರೆ ಕುಮಾರಸ್ವಾಮಿ ಅವರು ಧರ್ಮಸ್ಥಳ ಮಂಜುನಾಥನ ಎದುರು ಪ್ರಮಾಣ ಮಾಡಲು ಬರಲಿ ಎಂದು ಸವಾಲು ಹಾಕಿದ್ದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಕುರ್ಚಿ ಕಳೆದುಕೊಳ್ಳುತ್ತಾರೆ ಅಂತ ಶೋಭಾ ಕರಂದ್ಲಾಜೆ ಕಣ್ಣೀರು ಹಾಕಿದ್ದರು ಎಂದು ಲೇವಡಿ ಮಾಡಿರುವ ಕುಮಾರಸ್ವಾಮಿ, ನಾನು ಶೋಭಾ ಕರಂದ್ಲಾಜೆ ವಿರುದ್ಧ ಆರೋಪಿಸಿಲ್ಲ. ಮಾಧ್ಯಮವೊಂದರಲ್ಲಿ ವರದಿ ಪ್ರಕಟವಾಗಿತ್ತು. ಅದನ್ನು ಉಲ್ಲೇಖಿಸಿದ್ದೇನೆ ಅಷ್ಟೇ. ಮಹಿಳೆ ಎಂದು ಶೋಭಾರ ಬಗ್ಗೆ ಮಾತನಾಡಿಲ್ಲ. ಭ್ರಷ್ಟಚಾರದ ಕುರಿತು ಹೇಳಿದ್ದೆ. ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾನು ಸಿದ್ದ. ಆದರೆ ಸುಮ್ಮನೆ ನನ್ನ ಕೆಣಕಿದ್ರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.
ಭ್ರಷ್ಟಾಚಾರ ಆರೋಪದಲ್ಲಿ ಅವರೇ ಸಿಲುಕಿಕೊಂಡಿದ್ದಾರೆ, ಅದರಲ್ಲಿ ನಮ್ಮ ಪಾತ್ರವೇನೂ ಇಲ್ಲ. ಜನರಿಗೆ ಹೆದರದ ಶೋಭಾ ಕರಂದ್ಲಾಜೆ ದೇವರಿಗೆ ಹೆದರುತ್ತಾರಾ ಎಂದು ಅವರು ಈ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.