ಆಡಳಿತಾರೂಢ ರಾಜ್ಯ ಸರಕಾರದಲ್ಲಿ ನಡೆದಿರುವ ಭೂ ಹಗರಣಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಬಿ.ಶಿವರಾಂ ಆಗ್ರಹಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುಟುಂಬವೇ ಹಗರಣದಲ್ಲಿ ಸಿಲುಕಿರುವುದರಿಂದ ಸೂಕ್ತ ತನಿಖೆ ನಡೆಸಿ, ಮೂರು ತಿಂಗಳೊಳಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ವ್ಯವಸ್ಥೆ ಆಗಬೇಕು ಎಂದರು.
ಜಿಲ್ಲಾ ಕೇಂದ್ರಕ್ಕೆ ಸಿಎಂ ಭೇಟಿ ನೀಡಿ ತೆರಳಿದ ಕೂಡಲೇ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರನ್ನು ಬದಲಿಸಿದ್ದೇ ದೊಡ್ಡ ಸಾಧನೆ ಎಂದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ಜಿಲ್ಲೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಮೂವರು ಸಚಿವರು ಬದಲಾದರೇ ಹೊರತು ಜಿಲ್ಲೆಯ ಸಮಸ್ಯೆಗಳು ನಿವಾರಣೆಯಾಗಿಲ್ಲ ಎಂದು ಆರೋಪಿಸಿದರು.
ಅತಿವೃಷ್ಟಿಯಿಂದ 60 ಕೋಟಿ ರೂ. ನಷ್ಟವಾಗಿದೆ. ರೈತರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಷ್ಟಾದರೂ ಸರಕಾರ ಗಮನ ನೀಡುತ್ತಿಲ್ಲ ಎಂದು ದೂರಿದರು. ಕೆಪಿಸಿಸಿ ನೂತನ ಅಧ್ಯಕ್ಷ ಜಿ.ಪರಮೇಶ್ವರ್ ಶೀಘ್ರವೇ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅವರು ದಿನಾಂಕ ಖಚಿತಪಡಿಸಿದ ಕೂಡಲೇ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಸಂಘಟನೆಗೆ ಆಗಿರುವ ಹಿನ್ನಡೆ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ವರಿಷ್ಠರಿಗೆ ವಿವರಿಸಿದ್ದೇವೆ. ಶೀಘ್ರವೇ ಪದಾಧಿಕಾರಿಗಳ ನೇಮಕ ಆದೇಶ ಹೊರಡಿಸುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.