ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲಿ ತೊಡಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಾಯಕತ್ವವನ್ನು ಕೂಡಲೇ ಬದಲಿಸುವಂತೆ ಆಗ್ರಹಿಸಿ ಸೋಮವಾರ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲಾಗುವುದು ಎಂದು ಅನರ್ಹ ಶಾಸಕರ ನಾಯಕರಲ್ಲಿ ಒಬ್ಬರಾದ ಮಾಜಿ ಮಂತ್ರಿ ಶಿವನಗೌಡ ನಾಯಕ ತಿಳಿಸಿದ್ದಾರೆ.
ಶಾಸಕತ್ವದಿಂದ ಅನರ್ಹಗೊಂಡರೂ ಯಡಿಯೂರಪ್ಪ ವಿರುದ್ಧ ನಡೆಸುತ್ತಿರುವ ಹೋರಾಟದಿಂದ ಹಿಂದೆ ಸರಿಯಲ್ಲ, ನಾಯಕತ್ವ ಬದಲಾವಣೆ ಆಗುವವರೆಗೂ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು. ಸಿಎಂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಹಿಂದೆ ನಾವು ವರಿಷ್ಠರಿಗೆ ಪತ್ರ ಬರೆದಿದ್ದು ಈಗ ಸಾಬೀತಾಗುತ್ತಿದೆ ಎಂದರು.
ಶುಕ್ರವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ನ. 21ರಂದು ದೆಹಲಿಗೆ ಹೋಗುತ್ತಿದ್ದು ಅಂದು ಅಥವಾ 22ರಂದು ಬಿಜೆಪಿ ಅಧ್ಯಕ್ಷ ನೀತೀನ ಗಡ್ಕರಿ, ನಾಯಕರಾದ ಸುಷ್ಮಾ ಸ್ವರಾಜ್, ಎಲ್.ಕೆ.ಅಡ್ವಾಣಿ ಅವರನ್ನು ಭೇಟಿ ಮಾಡಲಾಗುವುದು ಎಂದರು.
ಅನರ್ಹ ಶಾಸಕರ ನಾಯಕರಾದ ಬಾಲಚಂದ್ರ ಜಾರಕಿಹೊಳಿ, ಗಡ್ಕರಿ ಅವರನ್ನು ಈಗಾಗಲೇ ಭೇಟಿ ಮಾಡಿದ್ದಾರೆ. ಈಗ ಮತ್ತೊಮ್ಮೆ ಭೇಟಿ ಮಾಡುತ್ತೇವೆ ಎಂದು ಶಿವನಗೌಡ ತಿಳಿಸಿದರು.