ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿರುವುದಕ್ಕೆ ಪೂರಕ ಹಾಗೂ ಅವಶ್ಯಕ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.
ಇಲ್ಲಿನ ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಮಾಜ ವಿಜ್ಞಾನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಜಾಗತೀಕರಣ ಹಾಗೂ ಉದಾರೀಕರಣ ವ್ಯವಸ್ಥೆಯಲ್ಲಿ ಕೇವಲ ಉತ್ಕೃಷ್ಟತೆಗೆ ಅಗ್ರ ಸ್ಥಾನವಿದ್ದು, ಈ ದಿಶೆಯಲ್ಲಿ ಜ್ಞಾನ ಆಧಾರಿತ ರಾಜ್ಯ ನಿರ್ಮಿಸಲು ಈಗಾಗಲೇ ರಾಜ್ಯದ 18 ವಿವಿಗಳ ಕುಲಪತಿ ಹಾಗೂ ಕುಲಸಚಿವರ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಹೇಳಿದರು.
ಜ್ಞಾನ ಆಧಾರಿತ ರಾಜ್ಯವನ್ನಾಗಿಸಲು ಎಲ್ಲ ಧರ್ಮ ಗುರುಗಳ ಸಹಕಾರ ಪಡೆಯಲಾಗುವುದು ಎಂದರು. ಮಹಿಳಾ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನ ಹಾಗೂ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಮಹಿಳಾ ಸಬಲೀಕರಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ನಿಜವಾಗಿಯೂ ಕಾರ್ಯ ಮಾಡುತ್ತಿದ್ದು, ಭಾಗ್ಯಲಕ್ಷ್ಮಿ ಯೋಜನೆ ಭವಿಷ್ಯದಲ್ಲಿ ಮಹಿಳೆಯರ ಅಭಿವೃದ್ಧಿಗೆ ಸಂಬಂಧಿಸಿದಂತೆ ತುಂಬಾ ಪರಿಣಾಮ ನೀಡಲಿದೆ ಎಂದರು.